Share News

ಬಾದಾಮಿ : ಗಣೇಶ ಹಬ್ಬದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಬಾದಾಮಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ, ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ಕೈಯಲ್ಲಿದ್ದ 19 ಕಳ್ಳತನದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

​ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಎಸ್‌ಪಿ, ಹುನಗುಂದ ಡಿವೈಎಸ್‌ಪಿ ಸಂತೋಷ ಬನಹಟ್ಟಿ, ಬಾದಾಮಿ ಸಿಪಿಐ ಕೆ.ಎಸ್. ಬನ್ನೆ ಹಾಗೂ ಪಿಎಸ್‌ಐಗಳಾದ ಹಣಮಂತ ಕೆ. ನರಳೆ ಮತ್ತು ಎನ್.ಎಲ್. ವಾಲಿಕಾರ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

​ಅನುಮಾನಾಸ್ಪದ ಕಾರು ತಡೆದು ತಪಾಸಣೆ:

ಸೆಪ್ಟೆಂಬರ್ 25 ರಂದು ಸಂಜೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಸಮೀಪ ಅಪರಾಧ ವಿಭಾಗದ ಪಿಎಸ್‌ಐ ಎನ್.ಎಲ್. ವಾಲಿಕಾರ ಮತ್ತು ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆಂಧ್ರಪ್ರದೇಶಂದ ನೋಂದಾಯಿತ (AP-28 DL-5847) ಸುಜುಕಿ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲಿಸಿದರು. ಕಾರಿನಲ್ಲಿದ್ದ ಪುರುಷ ಹಾಗೂ ಮಹಿಳೆಯನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಅವರನ್ನು ಠಾಣೆಗೆ ಕರೆತಂದು ಕಟ್ಟುನಿಟ್ಟಿನ ವಿಚಾರಣೆಗೊಳಪಡಿಸಲಾಯಿತು.

​ವಿಚಾರಣೆ ವೇಳೆ ಆರೋಪಿಗಳು ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಂದ 19 ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

​₹5.66 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ:

ಆರೋಪಿಗಳಿಂದ ಅಂದಾಜು ₹2.66 ಲಕ್ಷ ಮೌಲ್ಯದ 19 ವಿವಿಧ ಕಂಪನಿಗಳ ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ₹5.66 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

​ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಸಂ. 195/2026, ಕಲಂ 303(2) BNS ಹಾಗೂ 38 BNSS) ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಪಿಎಸ್‌ಐ ಎನ್.ಎಲ್. ವಾಲಿಕಾರ ಹಾಗೂ ತಾಂತ್ರಿಕ ವಿಭಾಗ ಸೇರಿ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚಿ ಪ್ರಶಂಸಿಸಿದ್ದಾರೆ.


Share News