Share News

ಬನವಾಸಿ (ಶಿರಸಿ): ಅನ್ನಭಾಗ್ಯ ಯೋಜನೆಯ ಸರ್ಕಾರಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಹೀಂದ್ರಾ ಸುಪ್ರೋ ವಾಹನವನ್ನು ಬನವಾಸಿ ಪೊಲೀಸರು ಜಪ್ತಿ ಮಾಡಿ, ಬರೋಬ್ಬರಿ 1.75 ಟನ್ (17.5 ಕ್ವಿಂಟಾಲ್) ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿರುವ ಘಟನೆ ಜುಲೈ 26ರ ರಾತ್ರಿ ಬನವಾಸಿಯ ದಾಸನಕೊಪ್ಪ ಕ್ರಾಸ್ ಬಳಿ ನಡೆದಿದೆ.

​ಜಂಟಿ ಕಾರ್ಯಾಚರಣೆ:

ತಹಶೀಲ್ದಾರರ ಸೂಚನೆಯಂತೆ ಆಹಾರ ಇಲಾಖೆಯ ಸಿಬ್ಬಂದಿ ಹಾಗೂ ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತಪ್ಪ ಕುಂಬಾರ್ ನೇತೃತ್ವದ ಪೊಲೀಸ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ, ಅನುಮಾನಸ್ಪದವಾಗಿ ಬಂದ ಮಹೀಂದ್ರಾ ಸುಪ್ರೋ ವಾಹನವನ್ನು ತಡೆದು ತಪಾಸಣೆ ನಡೆಸಿದೆ. ಈ ವೇಳೆ ಸೂಕ್ತ ದಾಖಲಾತಿ ಅಥವಾ ಪರವಾನಗಿ ಇಲ್ಲದೆ 33 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಪತ್ತೆಯಾಗಿದೆ.

​ಆರೋಪಿಯ ವಿವರ ಹಾಗೂ ಕೃತ್ಯ:

ಬಂಧಿತ ವಾಹನ ಚಾಲಕನನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊರಕೋಡ-ಕುಪಗಡ್ಡೆ ನಿವಾಸಿ ಸಚಿನ್ ನಾಗರಾಜ ಗೌಡ (26) ಎಂದು ಗುರುತಿಸಲಾಗಿದೆ. ಈತ ಬನವಾಸಿ ಕೋರ್ಲಕಟ್ಟ ಪ್ರದೇಶದಲ್ಲಿ ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸೊರಬ ಕಡೆಗೆ ಸಾಗಿಸುತ್ತಿದ್ದ ಎನ್ನಲಾಗಿದೆ.

​ಜಪ್ತಿಯಾದ ಸ್ವತ್ತುಗಳ ಮೌಲ್ಯ:

​ಪಡಿತರ ಅಕ್ಕಿ: 33 ಚೀಲಗಳು (1,750 ಕೆ.ಜಿ 4 ಗ್ರಾಂ) – ಅಂದಾಜು ಮೌಲ್ಯ ₹59,501

​ವಾಹನ: ಮಹೀಂದ್ರಾ ಸುಪ್ರೋ – ಅಂದಾಜು ಮೌಲ್ಯ ₹1.20 ಲಕ್ಷ

​ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕಿ ಕವಿತಾ ಎಸ್. ಪಾಟಣಕರ್ ಅವರು ಪರಿಶೀಲನೆ ನಡೆಸಿ, ಜಪ್ತಿಯಾದ ಅಕ್ಕಿಯು ಸರ್ಕಾರಿ ಪಡಿತರ ಅಕ್ಕಿ ಎಂಬುದನ್ನು ದೃಢಪಡಿಸಿ ಬನವಾಸಿ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Share News