Share News

ನಗರದ ಯುವಜನತೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಜಾಲವನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಭೇದಿಸಿದೆ. ಕಾರ್ಯಾಚರಣೆಯಲ್ಲಿ ಹೊರರಾಜ್ಯದ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ 11.04 ಕೋಟಿ ಮಾರುಕಟ್ಟೆ ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಪೊಲೀಸರು ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ, ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ಲಾಡ್ಜ್‌ ಒಂದರಲ್ಲಿ ಹಾಗೂ ಕಾಡುಗೋಡಿಯ ಚನ್ನಸಂದ್ರ ಮುಖ್ಯ ರಸ್ತೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಖಚಿತ ಮಾಹಿತಿಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಎಂಡಿಎಂಎ (MDMA) ಮತ್ತು ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ ಒಟ್ಟು 3 ಕೆಜಿ 912 ಗ್ರಾಂ ಎಂಡಿಎಂಎ ಹಾಗೂ 343 ಕೆಜಿ 170 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಒಂದು ಟಾಟಾ ಐಚರ್ ಗೂಡ್ಸ್ ವಾಹನ ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಅಂದಾಜಿನಂತೆ ಈ ವಸ್ತುಗಳ ಒಟ್ಟು ಮೌಲ್ಯ ಸುಮಾರು 5.77 ಕೋಟಿ ಆಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 11.04 ಕೋಟಿ ದಾಟುತ್ತದೆ.

ಇನ್ನು, ವಿಚಾರಣೆಯ ವೇಳೆ ಆರೋಪಿಗಳು ಹೆಚ್ಚಿನ ಹಣದ ಆಸೆಗಾಗಿ ವಿದೇಶಿ ಮೂಲದ ಅಪರಿಚಿತ ವ್ಯಕ್ತಿಗಳಿಂದ ಹಾಗೂ ರಾಜ್ಯದ ಇತರ ಡ್ರಗ್ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ತರುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಸದ್ಯ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇವರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮುಖ್ಯ ಸೂತ್ರಧಾರಿಗಳಿಗಾಗಿ ಶೋಧ ಮುಂದುವರಿದಿದೆ.

ಈ ಇಡೀ ಕಾರ್ಯಾಚರಣೆಯು ಹಿರಿಯ ಐಪಿಎಸ್ ಅಧಿಕಾರಿಗಳಾದ ಶ್ರೀ. ಅಜಯ್ ಹಿಲೋರಿ (ಅಪರ ಪೊಲೀಸ್ ಆಯುಕ್ತರು, ಅಪರಾಧ ವಿಭಾಗ), ಶ್ರೀ. ರಾಜ ಇಮಾಮ್ ಕಾಸಿಂ (ಉಪ ಪೊಲೀಸ್ ಆಯುಕ್ತರು , ಅಪರಾಧ-02 ವಿಭಾಗ), ಶ್ರೀ. ಯತೀಶ್ ಎನ್ (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ) ಮತ್ತು ಶ್ರೀ ಸೈದುಲು ಅಡಾವತ್ (ಉಪ ಪೊಲೀಸ್ ಆಯುಕ್ತರು , ವೈಟ್‌ಫೀಲ್ಡ್ ವಿಭಾಗ) ಅವರುಗಳ ಮಾರ್ಗದರ್ಶನವಿದ್ದಿತು. ಶ್ರೀ. ಎಂ ಎನ್ ನಾಗರಾಜ (ಸಹಾಯಕ ಪೊಲೀಸ್ ಆಯುಕ್ತರು, ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ), ಶ್ರೀ. ರಮೇಶ್ ಕೆ ಎಂ (ಸಹಾಯಕ ಪೊಲೀಸ್ ಆಯುಕ್ತರು, ಚಿಕ್ಕಪೇಟೆ ಉಪವಿಭಾಗ) ಮತ್ತು ಶ್ರೀಮತಿ ರೀನಾ ಸುವರ್ಣ (ಸಹಾಯಕ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ಉಪವಿಭಾಗ) ಅವರುಗಳ ಜೊತೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಉಪ್ಪಾರಪೇಟೆ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇತರ ಸಿಬ್ಬಂದಿಯವರು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News