ರಾಮನಗರ: ಜಿಲ್ಲೆಯ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರಿ ಪ್ರಮಾಣದ ಮಾದಕ ವಸ್ತು ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಮನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ತಲಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2019ರಲ್ಲಿ ರಾಮನಗರ ಟೌನ್ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತನಗರದ ರಾಯರದೊಡ್ಡಿ ಬೀದಿಯ ಮನೆಯೊಂದರಲ್ಲಿ ಮಾದಕ ವಸ್ತುವನ್ನು ಅಕ್ರಮವಾಗಿ ಇಟ್ಟುಕೊಂಡಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅಂದಿನ ತನಿಖಾಧಿಕಾರಿಗಳು ಸದರಿ ಮನೆಯ ಮೇಲೆ ದಾಳಿ ನಡೆಸಿ, ಸುಮಾರು 44 ಕೆ.ಜಿ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.
ನ್ಯಾಯಾಧೀಶರಾದ ಶ್ರೀ ಎಂ.ಹೆಚ್. ಅಣ್ಣಯ್ಯನವರ ಅವರು ಸುದೀರ್ಘ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕೆಳಗಿನವರಿಗೆ ಶಿಕ್ಷೆ ಪ್ರಕಟಿಸಿದ್ದಾರೆ:
ಸಿದ್ದಿಕ್ (ಐಜೂರು, ರಾಮನಗರ)
ಬೈರೇಗೌಡ (ಹನುಮಂತನಗರ, ರಾಮನಗರ)
ಮೊಹಮದ್ ಅಲಿ (ವಿರಾಜಪೇಟೆ, ಕೊಡಗು)
ಮೊಹಮ್ಮದ್ ಇಸ್ಮಾಯಿಲ್ (ಮಳವಳ್ಳಿ, ಮಂಡ್ಯ)
ಒಟ್ಟು ನಾಲ್ವರು ಆರೋಪಿಗಳಿಗೆ ತಲಾ 10 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 1,00,000 ರೂ. ದಂಡ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಶ್ರೀಮತಿ ವಸಂತಿ ಅಂಗಡಿ ಅವರು ಪ್ರಬಲವಾಗಿ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳಾದ ಪಿಎಸ್ಐ ಶುಭಾಂಭಿಕಾ, ಸಿಪಿಐ ನರಸಿಂಹಮೂರ್ತಿ, ಪಿಎಸ್ಐ ಜಾರ್ಜ್ ಪ್ರಕಾಶ್ ಹಾಗೂ ಸಿಬ್ಬಂದಿಗಳಾದ ಲೋಕೇಶ್, ಶಿವಕುಮಾರ್ ಮತ್ತು ಪ್ರಸನ್ನ ಅವರು ನ್ಯಾಯಾಲಯಕ್ಕೆ ನಿಖರ ಸಾಕ್ಷ್ಯಧಾರಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದರು.
“ಮಾದಕ ವಸ್ತುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನ್ಯಾಯಾಲಯದ ಈ ತೀರ್ಪು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ. ದಕ್ಷ ತನಿಖೆ ಮತ್ತು ಸಾಕ್ಷ್ಯಧಾರಗಳ ಮಂಡನೆಯಿಂದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿದೆ,” ಎಂದು ಪೊಲೀಸ್ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ತೀರ್ಪು ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟಗಾರರಲ್ಲಿ ನಡುಕ ಹುಟ್ಟಿಸಿದ್ದು, ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.