Share News

ಉಡುಪಿ: ಜಿಲ್ಲೆಯಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಅಭಾವದ ಸುದ್ದಿಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಕೆವೈಸಿ (KYC) ಅಪ್ಡೇಟ್ ಮಾಡುವ ನೆಪದಲ್ಲಿ ಸಾರ್ವಜನಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಇಬ್ಬರು ಗ್ರಾಹಕರು ಈ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ಕ್ರಿಮಿನಲ್‌ಗಳು ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ಅಪರಿಚಿತ ನಂಬರ್‌ಗಳಿಂದ ಕರೆ ಮಾಡುತ್ತಾರೆ. “ನಿಮ್ಮ ಗ್ಯಾಸ್ ಕೆವೈಸಿ ಬಾಕಿ ಇದೆ, ಕೂಡಲೇ ಅಪ್ಡೇಟ್ ಮಾಡದಿದ್ದರೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳುತ್ತದೆ” ಎಂದು ಹೆದರಿಸುತ್ತಾರೆ. ಬಳಿಕ ವಾಟ್ಸಾಪ್ ಮೂಲಕ ಒಂದು APK ಫೈಲ್ ಕಳುಹಿಸಿ ಅದನ್ನು ಇನ್‌ಸ್ಟಾಲ್ ಮಾಡಲು ಸೂಚಿಸುತ್ತಾರೆ. ಗ್ರಾಹಕರು ಆ ಫೈಲ್ ಡೌನ್‌ಲೋಡ್ ಮಾಡುತ್ತಿದ್ದಂತೆಯೇ ಅವರ ಫೋನ್ ಹ್ಯಾಕ್ ಆಗುತ್ತದೆ. ಇದರ ಮೂಲಕ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಹಣ ದೋಚಲಾಗುತ್ತದೆ.

ಉಡುಪಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬರು 1.5 ಲಕ್ಷ ರೂ. ಹಾಗೂ ಮತ್ತೊಬ್ಬರು 6 ಲಕ್ಷ ರೂ. ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. “ಹಳೆಯ ದರದಲ್ಲೇ ಸಿಲಿಂಡರ್ ಕೊಡುತ್ತೇವೆ” ಅಥವಾ “ಬೇಗನೆ ಸಿಲಿಂಡರ್ ವಿತರಿಸುತ್ತೇವೆ” ಎಂದು ನಕಲಿ ವೆಬ್‌ಸೈಟ್‌ಗಳ ಲಿಂಕ್ ಕಳುಹಿಸಿ ವಂಚಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎಸ್ಪಿ ಹರಿರಾಮ್ ಶಂಕರ್ ಅವರ ಪ್ರಮುಖ ಸೂಚನೆಗಳು:

​APK ಫೈಲ್ ಅಪಾಯಕಾರಿ: ಯಾವುದೇ ಕಾರಣಕ್ಕೂ ಅಪರಿಚಿತರು ಕಳುಹಿಸುವ ಎಪಿಕೆ (APK) ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.

​ತರಾತುರಿ ಬೇಡ: ಕೆವೈಸಿ ಅಪ್ಡೇಟ್ ಬಗ್ಗೆ ಸರ್ಕಾರ ಯಾವುದೇ ಹೊಸ ಅಥವಾ ತುರ್ತು ಆದೇಶ ಹೊರಡಿಸಿಲ್ಲ. ಗೊಂದಲವಿದ್ದರೆ ನೇರವಾಗಿ ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ.

​ಗೋಲ್ಡನ್ ಅವರ್ (Golden Hour): ಒಂದು ವೇಳೆ ವಂಚನೆಗೊಳಗಾದರೆ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಹಣ ಕಳೆದುಕೊಂಡ ಒಂದು ಗಂಟೆಯೊಳಗೆ ದೂರು ನೀಡಿದರೆ ಹಣವನ್ನು ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಜನರಲ್ಲಿರುವ ಆತಂಕವನ್ನೇ ವಂಚಕರು ಲಾಭವಾಗಿ ಬಳಸಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದ್ದು, ಸಾರ್ವಜನಿಕರ ಎಚ್ಚರಿಕೆಯೇ ಇದಕ್ಕೆ ಮೊದಲ ಮದ್ದಾಗಿದೆ” ಎಂದು ಎಸ್ಪಿ ಅವರು ತಿಳಿಸಿದ್ದಾರೆ.


Share News