: ತುರ್ತು ಸ್ಪಂದನಾ ಸಹಾಯವಾಣಿ ‘೧೧೨’ ಕಂಟ್ರೋಲ್ ರೂಂ ಹಾಗೂ ಗಸ್ತು ವಾಹನಗಳ ಸಿಬ್ಬಂದಿಯ ಜಂಟಿ ಕಾರ್ಯಾಚರಣೆಯ ಫಲವಾಗಿ, ಕೇರಳದ ಭೀಕರ ರಾಬರಿ (ದರೋಡೆ) ಪ್ರಕರಣದ ಆರೋಪಿಗಳು ಹಾಗೂ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಜಾಲವನ್ನು ಮೈಸೂರು ನಗರ ಪೊಲೀಸರು ಯಶಸ್ವಿಯಾಗಿ ಮಟ್ಟ ಹಾಕಿದ್ದಾರೆ.
ಸಿಬ್ಬಂದಿಯ ಈ ಶೀಘ್ರ ಮತ್ತು ವೃತ್ತಿಪರ ಕಾರ್ಯಾಚರಣೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು ಜೈಹಿಂದ್ ಎಂದಿದ್ದಾರೆ.
ಕೇರಳ ರಾಜ್ಯದಲ್ಲಿ ದರೋಡೆ (ರಾಬರಿ) ನಡೆಸಿ, ಅಲ್ಲಿಂದ ತಪ್ಪಿಸಿಕೊಳ್ಳಲು ಕೆಎಸ್ಆರ್ಟಿಸಿ ಬಸ್ ಹತ್ತಿ ಮೈಸೂರಿನ ಕಡೆಗೆ ಬರುತ್ತಿದ್ದ ಆರೋಪಿಗಳ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಅಲರ್ಟ್ ಆದ ೧೧೨ ಕಂಟ್ರೋಲ್ ರೂಂ ಸಿಬ್ಬಂದಿ, ಆರೋಪಿಗಳ ಫೋಟೋ ಹಾಗೂ ಮೊಬೈಲ್ ಲೋಕೇಷನ್ ಅನ್ನು ಆಧರಿಸಿ ನಿರಂತರ ನಿಗಾ ವಹಿಸಿದ್ದರು.
ಬಸ್ ಮೈಸೂರಿನ ಸಬ್ ಅರ್ಬನ್ (ಗ್ರಾಮಾಂತರ) ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ, ಕಂಟ್ರೋಲ್ ರೂಂ ಹಾಗೂ ಸ್ಥಳೀಯ ಕಾರ್ಯಾಚರಣೆ ನಡೆಸಿದ ೧೧೨ ತುರ್ತು ವಾಹನದ ಸಿಬ್ಬಂದಿಗಳು ಪರಸ್ಪರ ಸಮನ್ವಯತೆಯೊಂದಿಗೆ ಆರೋಪಿಗಳನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಲಷ್ಕರ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಮೈಸೂರು ನಗರದ ಬೋಗಾದಿ ಕಡೆಯಿಂದ ನಗರದ ಒಳಭಾಗಕ್ಕೆ ಜಿಪಿಎಸ್ ರಹಿತ ವಾಹನವೊಂದರಲ್ಲಿ ಅಕ್ರಮವಾಗಿ ಹಸುಗಳನ್ನು ಕೂಡಿ ಹಾಕಿ ಸಾಗಿಸಲಾಗುತ್ತಿದೆ ಎಂದು ಸಾರ್ವಜನಿಕರು ‘೧೧೨’ ಕಂಟ್ರೋಲ್ ರೂಂಗೆ ದೂರು ನೀಡಿದ್ದರು. ಮಾಹಿತಿ ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ‘ಗರುಡ-೯’ ಗಸ್ತು ವಾಹನದ ಸಿಬ್ಬಂದಿ, ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ಹೋಗಿದ್ದಾರೆ. ಸಿನಿಮಾ ಶೈಲಿಯಲ್ಲಿ ಹಿಂಬಾಲಿಸಿ ವಾಹನವನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ, ಹಸುಗಳನ್ನು ರಕ್ಷಿಸಿ ಮುಂದಿನ ಕ್ರಮಕ್ಕಾಗಿ ಇಡೀ ವಾಹನವನ್ನು ಮಂಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಕರ್ತವ್ಯದ ಮೇಲಿನ ಅತ್ಯುನ್ನತ ನಿಷ್ಠೆ ಹಾಗೂ ಸಮಯಪ್ರಜ್ಞೆ ಮೆರೆದ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್, IPS ರವರು ಹೃತ್ಪೂರ್ವಕ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಭವಿಷ್ಯದಲ್ಲಿಯೂ ಸಿಬ್ಬಂದಿಗಳಿಂದ ಇದೇ ರೀತಿಯ ವೃತ್ತಿಪರ ಬದ್ಧತೆಯನ್ನು ಅಪೇಕ್ಷಿಸುತ್ತಾ, ಸಾಧನೆ ಮಾಡಿದ ಅಧಿಕಾರಿಗಳಿಗೆ ಅಧಿಕೃತ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಈ ಗಣನೀಯ ಸಾಧನೆಯ ಸಂದರ್ಭದಲ್ಲಿ ಮೈಸೂರು ನಗರ ಕಂಟ್ರೋಲ್ ರೂಂ ವಿಭಾಗದ ಎಸಿಪಿ (ACP) ಆದ ಶ್ರೀ ಹರ್ಷ ಬಿ.ಕೆ ಅವರು ಉಪಸ್ಥಿತರಿದ್ದರು.