Share News

ಬೆಳಗಾವಿ: ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಅಕ್ರಮ ಸರಾಯಿ ಮಾರಾಟಗಾರರಿಗೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವ ಪೋಷಕರಿಗೆ ಭರ್ಜರಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡಿದರೆ ಅಂತಹವರ ಮೇಲೆ ರೌಡಿ ಶೀಟ್ ದಾಖಲಿಸಿ, ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು ಎಂದು ಅವರು ಗುಡುಗಿದ್ದಾರೆ.

ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟದ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಪೊಲೀಸ್ ಇಲಾಖೆ ಸಜ್ಜಾಗಿದೆ. “ಯಾರೇ ಆಗಲಿ ಅಕ್ರಮವಾಗಿ ಸರಾಯಿ ಮಾರಾಟದಲ್ಲಿ ತೊಡಗಿದ್ದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ಹಳೇ ಇತಿಹಾಸವನ್ನು ಗಮನಿಸಿ ತಕ್ಷಣ ರೌಡಿ ಶೀಟ್ ತೆರೆಯಲಾಗುವುದು. ಅಷ್ಟೇ ಅಲ್ಲದೆ, ಅಂತಹವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಪಿ ತಿಳಿಸಿದ್ದಾರೆ.

ಅಪರಾಧ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮೌನವಾಗಿರಬಾರದು ಎಂದು ಕರೆ ನೀಡಿರುವ ಎಸ್‌ಪಿ ಕೆ. ರಾಮರಾಜನ್, “ನಿಮ್ಮ ಸುತ್ತಮುತ್ತ ಯಾವುದೇ ಅಕ್ರಮಗಳು ನಡೆಯುತ್ತಿದ್ದರೆ ತಕ್ಷಣ ಕೆಎಸ್‌ಪಿ (KSP) ಆ್ಯಪ್ ಮೂಲಕ ದೂರು ನೀಡಿ. ಮಾಹಿತಿ ನೀಡಿದವರ ಹೆಸರನ್ನು ಅತ್ಯಂತ ಗೌಪ್ಯವಾಗಿಡಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಬಗ್ಗೆಯೂ ಕಠಿಣ ಎಚ್ಚರಿಕೆ ನೀಡಿರುವ ಅವರು, “ಚಿಕ್ಕ ಮಕ್ಕಳ ಕೈಗೆ ಬೈಕ್ ಅಥವಾ ಇತರ ವಾಹನಗಳನ್ನು ನೀಡುವ ಪೋಷಕರು ಜಾಗರೂಕರಾಗಿರಬೇಕು. ಒಂದು ವೇಳೆ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಂಡುಬಂದಲ್ಲಿ ಅಥವಾ ಅಪಘಾತ ಸಂಭವಿಸಿದಲ್ಲಿ, ಅದಕ್ಕೆ ಪೋಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಜೈಲು ಶಿಕ್ಷೆ ವಿಧಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.

​ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಎಸ್‌ಪಿ ಮನವಿ ಮಾಡಿದ್ದಾರೆ.

 


Share News