Share News

ಚಿಕ್ಕಬಳ್ಳಾಪುರ: ಜಿಲ್ಲೆಯ ಖಾಸಗಿ ಕಾಲೇಜೊಂದರ ಬಳಿ ಕರ್ತವ್ಯ ನಿರತ ಪೊಲೀಸರ ಮೇಲೆ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಸಮಾಜಕ್ಕೆ ಶಿಸ್ತು ಕಲಿಸಬೇಕಾದ ವಿದ್ಯಾರ್ಥಿಗಳೇ ಕಾನೂನು ಕೈಗೆತ್ತಿಕೊಂಡು ಎಎಸ್‌ಐ ಮೇಲೆ ಮುಗಿಬಿದ್ದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ನಂದಿಗಿರಿಧಾಮ ಪೊಲೀಸ್‌ ಠಾಣೆಯ ಎಎಸ್‌ಐ ಗಂಗರಾಜು ಹಾಗೂ ಕಾನ್ಸ್‌ಟೇಬಲ್ ಅವರು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ನಟ-ನಟಿಯರ ಭದ್ರತೆಗಾಗಿ ಕಾಲೇಜಿನ ಗೇಟ್ ಬಳಿ ಕರ್ತವ್ಯದಲ್ಲಿದ್ದರು. ಈ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳು ಸೈಲೆನ್ಸರ್ ಮಾರ್ಪಾಡು ಮಾಡಿದ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರು.

ಬೈಕ್ ಸೌಂಡ್ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ “ಸೈಲೆಂಟ್ ಆಗಿ ಹೋಗಿ” ಎಂದು ಎಎಸ್‌ಐ ಎಚ್ಚರಿಕೆ ನೀಡಿದ್ದಾರೆ. ಆದರೆ ಪೊಲೀಸರ ಮಾತಿಗೆ ಕಿಂಚಿತ್ತೂ ಗೌರವ ನೀಡದ ವಿದ್ಯಾರ್ಥಿಯೊಬ್ಬ, “ಅವನೊಬ್ಬ ಪೊಲೀಸ್, ಏನು ಮಾಡ್ತಾನೆ?” ಎಂದು ಸವಾಲು ಹಾಕಿ ಮತ್ತೆ ಜೋರಾಗಿ ಶಬ್ದ ಮಾಡಿದ್ದಾನೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಗಲಾಟೆ ನಿಯಂತ್ರಿಸಲು ಎಎಸ್‌ಐ ಲಾಠಿ ಬೀಸಿದ್ದಾರೆ ಎನ್ನಲಾಗಿದೆ.

ಲಾಠಿ ಏಟಿನಿಂದ ವಿದ್ಯಾರ್ಥಿಗೆ ರಕ್ತ ಬಂದಿದ್ದನ್ನೇ ನೆಪವಾಗಿಸಿಕೊಂಡ ಪುಂಡ ವಿದ್ಯಾರ್ಥಿಗಳ ಗುಂಪು, ಒಮ್ಮೆಲೇ ಎಎಸ್‌ಐ ಗಂಗರಾಜು ಅವರ ಮೇಲೆ ಮುಗಿಬಿದ್ದಿದೆ. ಅವರನ್ನು ರಕ್ಷಿಸಲು ಬಂದ ಕಾನ್ಸ್‌ಟೇಬಲ್‌ನನ್ನು ನೂಕಾಡಿ ವಿದ್ಯಾರ್ಥಿಗಳು ದರ್ಪ ಮೆರೆದಿದ್ದಾರೆ. ಸಾರ್ವಜನಿಕರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸರ ಮೇಲೆಯೇ ಈ ರೀತಿ ಹಲ್ಲೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಸಂಬಂಧ ನಂದಿಗಿರಿಧಾಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಪುಂಡ ವಿದ್ಯಾರ್ಥಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

​ವಿದ್ಯಾರ್ಥಿ ದೆಸೆಯಲ್ಲಿ ಕಾನೂನಿನ ಬಗ್ಗೆ ಗೌರವ ಇಲ್ಲದಿದ್ದರೆ ಅದು ಅವರ ಭವಿಷ್ಯಕ್ಕೆ ಕಂಟಕವಾಗಲಿದೆ. ಪೊಲೀಸರ ಮೇಲೆ ಕೈಮಾಡಿರುವ ಈ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

 


Share News