Share News

ಜೋಗ ಫಾಲ್ಸ್ (ಶಿವಮೊಗ್ಗ): ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ವರ್ತನೆ ಮತ್ತೆ ಮುನ್ನಲೆಗೆ ಬಂದಿದೆ. ನಿಯಮ ಮೀರಿ ಜಲಪಾತದ ನಿರ್ಬಂಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅಪಾಯಕಾರಿ ರೀತಿಯಲ್ಲಿ ವಿಡಿಯೊ ಚಿತ್ರೀಕರಣ ನಡೆಸಿದ ಮೂವರು ಯುವಕರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.

​ತೀರ್ಥಹಳ್ಳಿ ತಾಲೂಕಿನ ಜೋಗಿನಕೊಪ್ಪ ಮೂಲದ ಮೋಹನ ಶುಭಕರ ಗೌಡ (26), ಭರತ ಗೌಡ (27) ಹಾಗೂ ಮದನ ಗೌಡ ಎಂಬುವವರೇ ಪೊಲೀಸರ ಅತಿಥಿಯಾದ ಯುವಕರು.

ಜೋಗ ಜಲಪಾತದ ಅತ್ಯಂತ ಭೀಕರ ಹಾಗೂ ಆಳವಾದ ‘ರಾಜಾ ಫಾಲ್ಸ್’ ಸಮೀಪದ ಸಾರ್ವಜನಿಕ ಪ್ರವೇಶ ನಿರ್ಬಂಧಿತ ವಲಯಕ್ಕೆ ಈ ಮೂವರು ಯುವಕರು ಅಕ್ರಮವಾಗಿ ನುಗ್ಗಿದ್ದಾರೆ. ಅಲ್ಲಿನ ಕಡಿದಾದ ಹಾಗೂ ಅಪಾಯಕಾರಿ ಕಲ್ಲುಬಂಡೆಗಳ ಮೇಲೆ ನಿಂತು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಯುವಕರು, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಲ್ಲದೆ, ಇತರ ಪ್ರವಾಸಿಗರೂ ಸಹ ಇದೇ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡುವಂತೆ ಪ್ರೋತ್ಸಾಹಿಸುವ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಯುವಕರ ಹುಚ್ಚಾಟದ ವಿಡಿಯೊ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜೋಗ ಪೊಲೀಸ್ ಠಾಣೆಯ ಅಧಿಕಾರಿಗಳು, ಸ್ವಯಂಪ್ರೇರಿತವಾಗಿ ಕಾರ್ಯಾಚರಣೆ ನಡೆಸಿ ಯುವಕರನ್ನು ಗುರುತಿಸಿದ್ದಾರೆ. ನಿಯಮ ಉಲ್ಲಂಘನೆ ಹಾಗೂ ಪ್ರಾಣಕ್ಕೆ ಸಂಕಷ್ಟ ತಂದೊಡ್ಡುವ ರೀತಿಯಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಳೆಗಾಲದ ಸಮಯದಲ್ಲಿ ಜೋಗ ಜಲಪಾತದ ಸುತ್ತಮುತ್ತಲಿನ ಕಲ್ಲು ಬಂಡೆಗಳು ಅತ್ಯಂತ ಜಾರುವ ಸ್ವಭಾವ ಹೊಂದಿದ್ದು ಪಾಚಿ ಕಟ್ಟಿರುತ್ತವೆ. ಇಲ್ಲಿನ ಸಣ್ಣದೊಂದು ನಿರ್ಲಕ್ಷ್ಯ ಅಥವಾ ಕಾಲು ಜಾರುವಿಕೆಯೂ ಸಹ ನೇರ ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಪ್ರವಾಸಿಗರು ಯಾವುದೇ ಕಾರಣಕ್ಕೂ ಇಲಾಖೆಯ ಸುರಕ್ಷತಾ ನಿಯಮಗಳನ್ನು ಮೀರಿ ಕಣಿವೆ ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಇಳಿಯಬಾರದು, ಕೇವಲ ವೀಕ್ಷಣಾ ಗ್ಯಾಲರಿಗಳಿಂದಲೇ ಜಲಪಾತದ ಸೌಂದರ್ಯ ಸವಿಯಬೇಕು ಎಂದು ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕಡಕ್ ಎಚ್ಚರಿಕೆ ನೀಡಿದ್ದಾರೆ.

 


Share News