ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ‘ಆಪರೇಷನ್ ಮುಕ್ತ’ ಎಂಬ ಹೆಸರಿನಲ್ಲಿ ಶನಿವಾರ ಮುಂಜಾನೆಯಿಂದಲೇ ಈ ಮೆಗಾ ರೇಡ್ ಆರಂಭವಾಗಿದೆ.
ಮುಂಜಾನೆ 5 ಗಂಟೆಯಿಂದ ಶೋಧ ಕಾರ್ಯ:
ವೈಟ್‌ಫೀಲ್ಡ್ ಪೊಲೀಸ್ ವಿಭಾಗದ ವ್ಯಾಪ್ತಿಗೆ ಒಳಪಡುವ ವೈಟ್‌ಫೀಲ್ಡ್, ಕಾಡುಗೋಡಿ, ಮಾರತ್ತಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಮಹದೇವಪುರ ಸೇರಿದಂತೆ ಐದಕ್ಕೂ ಹೆಚ್ಚು ಪ್ರಮುಖ ಪ್ರದೇಶಗಳಲ್ಲಿ ಪೊಲೀಸರ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಮುಂಜಾನೆ 5 ಗಂಟೆಯಿಂದಲೇ ಕಾರ್ಯಪ್ರವೃತ್ತರಾಗಿರುವ ನೂರಾರು ಪೊಲೀಸ್ ಸಿಬ್ಬಂದಿ, ವಲಸಿಗರು ನೆಲೆಸಿರುವ ಶೆಡ್‌ಗಳು ಹಾಗೂ ಕೊಂಪೆಗಳಿಗೆ ದಿಢೀರ್ ಭೇಟಿ ನೀಡಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ದಾಖಲೆಗಳ ಕೂಲಂಕುಷ ಪರಿಶೀಲನೆ:
ಸಂಶಯಾಸ್ಪದ ಸ್ಥಳಗಳಲ್ಲಿ ನೆಲೆಸಿರುವ ಪ್ರತಿಯೊಬ್ಬರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಾಸಸ್ಥಳದ ಪುರಾವೆ ಹಾಗೂ ಇತರ ದಾಖಲೆಗಳನ್ನು ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ಮಾಡುತ್ತಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ದೇಶದೊಳಗೆ ನುಸುಳಿ ವಾಸ್ತವ್ಯ ಹೂಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲು ಈ ಆಪರೇಷನ್ ನಡೆಸಲಾಗುತ್ತಿದೆ.
ಅಕ್ರಮ ವಲಸಿಗರಿಂದ ನಗರದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭದ್ರತೆಗೆ ಎದುರಾಗಬಹುದಾದ ಭೀತಿಯನ್ನು ತಡೆಯಲು ಬೆಂಗಳೂರು ನಗರ ಪೊಲೀಸ್ ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರ್ಯಾಚರಣೆಯ ಪೂರ್ಣ ವಿವರ ಹಾಗೂ ಬಂಧಿತರ ಸಂಖ್ಯೆಯ ಕುರಿತು ತನಿಖೆಯ ನಂತರ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ.
Arakshakara Times Media
Related posts
