ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಗೇರಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಗ್ರಾಮದ ನಿವಾಸಿ ಶಿವಕುಮಾರ್ ಎಂಬುವವರ ಪತ್ನಿ ನವ್ಯ (28) ಮೃತಪಟ್ಟ ದುರ್ದೈವಿ.
ಮೃತ ನವ್ಯ ಮತ್ತು ಶಿವಕುಮಾರ್ ಅವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ಎರಡು ದಿನಗಳಿಂದಲೂ ಮನೆಯಲ್ಲಿ ತೀವ್ರ ಜಗಳ ನಡೆದಿತ್ತು. ಸೋಮವಾರ ಮುಂಜಾನೆ ಮನೆಯ ಮೇಲ್ಭಾಗದ ಕಿಟಕಿಗೆ ನವ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಬಾಗಿಲು ತೆರೆದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ.
ಬಾಲಕನ ಸಾಕ್ಷ್ಯ – ನಾಪತ್ತೆಯಾದ ಕುಟುಂಬಸ್ಥರು:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ 4 ವರ್ಷದ ಪುತ್ರ ಲಕ್ಕಿ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. “ನನ್ನ ತಾಯಿಯ ಸಾವಿಗೆ ತಾತ ಮತ್ತು ಅಜ್ಜಿಯೇ ಕಾರಣ” ಎಂದು ಬಾಲಕ ಪೊಲೀಸ್ ಹಾಗೂ ಗ್ರಾಮಸ್ಥರ ಮುಂದೆ ಹೇಳಿಕೆ ನೀಡಿದ್ದಾನೆ. ಇತ್ತ ಘಟನೆ ನಡೆದ ಬೆನ್ನಲ್ಲೇ ಪತಿ ಶಿವಕುಮಾರ್, ಅತ್ತೆ ಕಮಲಮ್ಮ ಹಾಗೂ ಮಾವ ಕರಿಯಪ್ಪ ನಾಪತ್ತೆಯಾಗಿದ್ದು, ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸಾತನೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಿಕಾಸ್‌ಗೌಡ ಹಾಗೂ ಸಬ್‌ಇನ್ಸ್‌ಪೆಕ್ಟರ್ ಸಮಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
”ಇದು ಆತ್ಮಹತ್ಯೆಯೋ ಅಥವಾ ಹಲ್ಲೆ ನಡೆಸಿ ಕೊಲೆ ಮಾಡಿದ ನಂತರ ನೇಣು ಹಾಕಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ತಿಳಿಯಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವರದಿ : ಗಿಲ್ಬರ್ಟ್. ಜೆ ಆರಕ್ಷಕರ ಟೈಮ್ಸ್ ಮೀಡಿಯಾ