ಮಂಗಳೂರು: ಮಾದಕ ವಸ್ತುಗಳ ವಿರುದ್ಧ ಕಠಿಣ ಸಮರ ಸಾರಿರುವ ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ವಿವಿಧ ಠಾಣೆಗಳಲ್ಲಿ ಜಪ್ತಿ ಮಾಡಲಾಗಿದ್ದ ಬರೋಬ್ಬರಿ ₹82 ಕೋಟಿ ಮೌಲ್ಯದ ಭಾರಿ ಪ್ರಮಾಣದ ಡ್ರಗ್ಸ್‌ಗಳನ್ನು ಮುಲ್ಕಿಯ ಕೊಲ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟು ನಾಶಪಡಿಸಿದೆ.
ನ್ಯಾಯಾಲಯದ ಅನುಮತಿ ಪಡೆದು ವಿಲೇವಾರಿ:
‘ಡ್ರಗ್ ಡಿಸ್ಪೋಸಲ್ ಕಮಿಟಿ’ಯ ಸಮ್ಮುಖದಲ್ಲಿ ಹಾಗೂ ನ್ಯಾಯಾಲಯದ ನಿರ್ದೇಶನದಂತೆ ಕಮಿಷನರೇಟ್ ವ್ಯಾಪ್ತಿಯ 16 ಠಾಣೆಗಳಲ್ಲಿ ದಾಖಲಾಗಿದ್ದ 59 NDPS ಪ್ರಕರಣಗಳಿಗೆ ಸೇರಿದ 450 ಕೆ.ಜಿ ಗಾಂಜಾ ಮತ್ತು 43.26 ಕೆ.ಜಿ MDMA ಸೇರಿ ಒಟ್ಟು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ.
ನಾಶಪಡಿಸಲಾದ ಪ್ರಮುಖ ಜಪ್ತಿಗಳು:
ಮಂಗಳೂರು ಪೂರ್ವ ಠಾಣೆ (2024): ₹75 ಕೋಟಿ ಮೌಲ್ಯದ 37 ಕೆ.ಜಿ MDMA
ಮುಲ್ಕಿ ಠಾಣೆ (2025): ₹4.47 ಕೋಟಿ ಮೌಲ್ಯದ 4 ಕೆ.ಜಿ MDMA
ಮೂಡಬಿದ್ರೆ ಠಾಣೆ: ₹36 ಲಕ್ಷ ಮೌಲ್ಯದ 111 ಕೆ.ಜಿ ಗಾಂಜಾ
ಕೊಣಾಜೆ ಠಾಣೆ: ₹20 ಲಕ್ಷ ಮೌಲ್ಯದ 106 ಕೆ.ಜಿ ಗಾಂಜಾ
2026ರ ಕಮಿಷನರೇಟ್ ಸಾಧನೆ ಹಾಗೂ ಅಂಕಿ-ಅಂಶ:
2026ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸರು ಇದುವರೆಗೆ 87 NDPS ಪ್ರಕರಣಗಳನ್ನು ದಾಖಲಿಸಿಕೊಂಡು 157 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಗಳಲ್ಲಿ ₹8.18 ಕೋಟಿ ಮೌಲ್ಯದ 148.6 ಕೆ.ಜಿ ಗಾಂಜಾ, 7.16 ಕೆ.ಜಿ MDMA ಮತ್ತು 1.7 ಕೆ.ಜಿ ಹೈಡ್ರೋ ವೀಡ್ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 356 ಪ್ರಕರಣಗಳನ್ನು ದಾಖಲಿಸಿ 463 ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರಿಗೆ ಮಾಹಿತಿ ನೀಡಲು ಕರೆ:
ಸಾರ್ವಜನಿಕರು ಅಥವಾ ಯುವಜನತೆ ಮಾದಕ ವಸ್ತುಗಳ ಜಾಲದ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ, ತಕ್ಷಣವೇ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಕ್ಯೂಆರ್ ಕೋಡ್ (QR Code) ಬಳಸಿ ಅಥವಾ ತುರ್ತು ಸಂಖ್ಯೆ 112 ಮತ್ತು 9480802321 ಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು.