ಆಲ್ದೂರು: ತಾಲ್ಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸರವಳ್ಳಿ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ ಭರ್ಜರಿ ಕಳ್ಳತನ ಪ್ರಕರಣವನ್ನು ಆಲ್ದೂರು ವೃತ್ತದ ಸಿಪಿಐ ನೇತೃತ್ವದ ಪೊಲೀಸ್ ತಂಡವು ಕೇವಲ 72 ಗಂಟೆಗಳ ಅವಧಿಯಲ್ಲಿ ಯಶಸ್ವಿಯಾಗಿ ಬೇಧಿಸಿದೆ. ನಂಬಿಕಸ್ಥ ಮನೆ ಕೆಲಸದವನೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ ಕಳುವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಬಸರವಳ್ಳಿ ಗ್ರಾಮದ ಮನೆಯೊಂದರಲ್ಲಿ ಜೂನ್ 17ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಸುಮಾರು 86 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಈ ಕುರಿತು ಜೂನ್ 18ರಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಜೂನ್ 18 ರಿಂದ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಪ್ರಕರಣ ದಾಖಲಾದ ಕೇವಲ 72 ಗಂಟೆಗಳ ಒಳಗೆ ಆರೋಪಿಯನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯಿಂದ ಕಳುವಾಗಿದ್ದ ಪೂರ್ತಿ 86 ಗ್ರಾಂ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಲ್ದೂರು ವೃತ್ತದ ಸಿಪಿಐ (CPI) ಶ್ರೀ ಸೋಮೇಗೌಡ ಪಿ.ಪಿ. ಅವರ ನೇತೃತ್ವದಲ್ಲಿ ನಡೆದ ಈ ಭರ್ಜರಿ ಕಾರ್ಯಾಚರಣೆಯಲ್ಲಿ, ಪಿಎಸ್ಐ (PSI) ಶ್ರೀ ಮೂರ್ತಪ್ಪ ಡಿ. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀಗಳಾದ ಗಂಗಾಧರಸ್ವಾಮಿ, ಚೇತನ್ ಕುಮಾರ್, ವಸಂತ್ ಕುಮಾರ್, ಪ್ರಸನ್ನ ಕುಮಾರ್, ತನ್ವೀರ್, ಚೇತನ್ ಬಿ.ಎಲ್ ಮತ್ತು ಮನು ಅವರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೇವಲ ಮೂರೇ ದಿನಗಳಲ್ಲಿ ಕಳ್ಳನನ್ನು ಹಿಡಿದು ಒಡವೆ ಪತ್ತೆ ಹಚ್ಚಿದ ಆಲ್ದೂರು ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.