Share News

ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ (DL) ಅವಧಿ ಮುಕ್ತಾಯವಾದ ನಂತರ ಗಾಬರಿ ಪಡಬೇಕಿಲ್ಲ. ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ತಂದಿರುವ ಹೊಸ ತಿದ್ದುಪಡಿಯ ಪ್ರಕಾರ, ಡಿಎಲ್ ಅವಧಿ ಮುಗಿದ ನಂತರವೂ ಮುಂದಿನ 30 ದಿನಗಳವರೆಗೆ ಅದರ ಮಾನ್ಯತೆ ಮುಂದುವರಿಯಲಿದೆ.

​ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು 1988ರ ಕಾಯ್ದೆಯ ಸೆಕ್ಷನ್ 8, 9 ಮತ್ತು 12 ಅನ್ನು ಕೈಬಿಟ್ಟು, ಹೊಸದಾಗಿ ಸೆಕ್ಷನ್ 14 ಮತ್ತು 15 ಅನ್ನು ಸೇರ್ಪಡೆಗೊಳಿಸಿದೆ. ಈ ಬದಲಾವಣೆಯ ಪ್ರಮುಖ ಅಂಶಗಳು ಇಲ್ಲಿವೆ:

ಈ ಮೊದಲು ಡಿಎಲ್ ಎಕ್ಸ್‌ಪೈರಿ ದಿನಾಂಕದಿಂದಲೇ ನವೀಕರಣವಾಗುತ್ತಿತ್ತು. ಆದರೆ ಈಗ ‘ಎಕ್ಸ್‌ಪೈರಿ’ ಪದದ ಬದಲಿಗೆ ‘ನವೀಕರಣ’ ಪದ ಬಳಸಲಾಗಿದ್ದು, ಚಾಲಕರು ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಮುಂದಿನ ಅವಧಿಗೆ ಡಿಎಲ್ ನವೀಕರಣಗೊಳ್ಳಲಿದೆ. ಈ 30 ದಿನಗಳ ‘ಗ್ರೇಸ್ ಅವಧಿ’ಯಲ್ಲಿ ಅಪಘಾತ ಸಂಭವಿಸಿದರೂ ವಿಮೆ (Insurance) ಕ್ಲೈಮ್ ಮಾಡಲು ಅವಕಾಶವಿರುತ್ತದೆ.

ವಾಹನ ಸವಾರರು ಇನ್ನು ಮುಂದೆ ತಮ್ಮ ನಿಗದಿತ ಆರ್​ಟಿಒ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ರಾಜ್ಯದ ಯಾವುದೇ ಆರ್​ಟಿಒ ಕಚೇರಿಯಲ್ಲಿ ಬೇಕಾದರೂ ವಾಹನ ನೋಂದಣಿ ಮಾಡಿಸಲು ಈ ತಿದ್ದುಪಡಿ ಅವಕಾಶ ಕಲ್ಪಿಸಿದೆ.

ವಿಮೆ ಅವಧಿ: ಡಿಎಲ್ ಮಾನ್ಯತೆ ವಿಸ್ತರಣೆಯಾದ ಹಿನ್ನೆಲೆಯಲ್ಲಿ ವಿಮಾ ಪ್ರಮಾಣ ಪತ್ರದ ಅವಧಿಯೂ 30 ದಿನಗಳವರೆಗೆ ಅನ್ವಯವಾಗಲಿದೆ.

​ಮಾಲೀಕತ್ವ ವರ್ಗಾವಣೆ: ವಾಹನ ಮಾರಾಟ ಮಾಡಿದಾಗ ಮಾಲೀಕತ್ವ ವರ್ಗಾವಣೆ ಬಗ್ಗೆ ವಿಮಾ ಸಂಸ್ಥೆಗೆ ತಿಳಿಸುವ ಅವಧಿಯನ್ನು 14 ದಿನಗಳಿಂದ 30 ದಿನಗಳಿಗೆ ಏರಿಸಲಾಗಿದೆ.

ಹಿಟ್ ಆಂಡ್ ರನ್: ಇಂತಹ ಪ್ರಕರಣಗಳಲ್ಲಿ ಕನಿಷ್ಠ ದಂಡವನ್ನು 25 ಸಾವಿರದಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ (ಗರಿಷ್ಠ 5 ಲಕ್ಷ ರೂ.). ಜೊತೆಗೆ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು.

​ಕರ್ಕಶ ಶಬ್ದ: ವಾಹನಗಳಿಂದ ಕರ್ಕಶ ಶಬ್ದ ಉಂಟು ಮಾಡಿದರೆ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ, ಎರಡನೇ ಬಾರಿ ಪುನರಾವರ್ತನೆಯಾದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

​ವಾಹನ ದೋಷ: ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ದೋಷವಿದ್ದು ಅಪಘಾತವಾದರೆ ಮಾಲೀಕರಿಗೆ 6 ತಿಂಗಳ ಜೈಲು ಅಥವಾ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

​ವಾಯುಮಾಲಿನ್ಯ: ಪರಿಸರ ಮಾಲಿನ್ಯ ಉಂಟು ಮಾಡಿದರೆ ಮೊದಲ ಬಾರಿ 10 ಸಾವಿರ ರೂ. ದಂಡ ಮತ್ತು 3 ತಿಂಗಳು ಲೈಸೆನ್ಸ್ ಅಮಾನತು ಮಾಡಲಾಗುತ್ತದೆ.

2019ರಲ್ಲಿ ಈ ಗ್ರೇಸ್ ಅವಧಿಯನ್ನು ತೆಗೆದುಹಾಕಲಾಗಿತ್ತು, ಆದರೆ ಈಗ ಸಾರ್ವಜನಿಕರ ಹಿತದೃಷ್ಟಿಯಿಂದ ಪುನಃ 30 ದಿನಗಳ ಕಾಲಾವಕಾಶ ನೀಡಲಾಗಿದೆ. ವಾಹನ ಸವಾರರು ಈ ಬದಲಾವಣೆಗಳನ್ನು ಗಮನಿಸಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.


Share News