ಬೆಂಗಳೂರು: ಸಿಲಿಕಾನ್ ಸಿಟಿಯ ಬೊಮ್ಮನಹಳ್ಳಿಯಲ್ಲಿ ಒಂಟಿಯಾಗಿ ವಾಸವಿದ್ದ ಉತ್ತರ ಭಾರತ ಮೂಲದ ಮಹಿಳೆಯೊಬ್ಬರ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪರಿಚಯಸ್ಥರೇ ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ಕೊಲೆಯಾದ ದುರ್ದೈವಿಯನ್ನು ಉತ್ತರ ಭಾರತ ಮೂಲದ ಕೃಷ್ಣ ಬರ್ಮನ್ (40) ಎಂದು ಗುರುತಿಸಲಾಗಿದೆ. ಇವರು ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಂಗಸಂದ್ರದ ಮುನಿಯಪ್ಪ ಲೇಔಟ್‌ನಲ್ಲಿರುವ ಬಾಡಿಗೆ ಕೋಣೆಯೊಂದರಲ್ಲಿ ಒಬ್ಬರೇ ವಾಸವಾಗಿದ್ದರು. ನಗರದ ವಿವಿಧ ಮನೆಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡು ಇವರು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಮಹಿಳೆಯ ಕೋಣೆಗೆ ಬಂದಿರುವ ದುಷ್ಕರ್ಮಿಗಳು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶವವು ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆಯೇ ಅಥವಾ ಕೊಲೆಯ ನಂತರ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿದೆಯೇ ಎಂಬ ಕೋನದಲ್ಲೂ ತನಿಖೆ ಆರಂಭವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಕೃಷ್ಣ ಬರ್ಮನ್ ಅವರಿಗೆ ಪರಿಚಿತರಾಗಿದ್ದವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಮತ್ತು ಉನ್ನತ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ (FSL) ಹಾಗೂ ಶ್ವಾನದಳದ ಸಿಬ್ಬಂದಿ ಕೂಡ ಭೇಟಿ ನೀಡಿ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ. ಈ ಘಾತಕ ಕೊಲೆಗೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಡುಕರ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.