ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಸುಲಿಗೆ ಮತ್ತು ಕಳವು ಕೃತ್ಯಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕುಖ್ಯಾತ ತಂಡವೊಂದನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 23.03.2026 ರಂದು ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ನಿವಾಸಿ ಶ್ರೀಮತಿ ಶಾಮಲಮ್ಮ ಅವರು ವಿಶ್ವಸಿಂಧು ಆಸ್ಪತ್ರೆಯ ಮುಂಭಾಗ ವಾಕಿಂಗ್ ಮಾಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರ ಕೊರಳಿನಲ್ಲಿದ್ದ 09 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ, ದಿನಾಂಕ 24.03.2026 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಎಂ.ಮಂಜುನಾಥ್ ಅವರು ಚದಲಪುರ ಕ್ರಾಸ್‌ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ, ಬಿಳಿ ಬಣ್ಣದ ಕಾರಿನಲ್ಲಿ ಬಂದ ತಂಡ ಅವರನ್ನು ಬಲವಂತವಾಗಿ ಎಳೆದುಕೊಂಡು ಹೋಗಿ, ಹಲ್ಲೆ ನಡೆಸಿ ಹಣ ಲೂಟಿ ಮಾಡಿ ರಾಯಲ್ ಓಕ್ ಅಂಗಡಿ ಬಳಿ ಬಿಟ್ಟು ಹೋಗಿದ್ದರು.
ಈ ಎರಡೂ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಇವೆಲ್ಲವನ್ನೂ ಒಂದೇ ತಂಡ ನಡೆಸಿರುವುದು ದೃಢಪಟ್ಟಿತು. ಕೂಡಲೇ ಕಾರ್ಯಪ್ರವೃತ್ತರಾದ ವಿಶೇಷ ತಂಡವು ಕೆಎ-51 ಎಂಬಿ-0931 ನೋಂದಣಿ ಸಂಖ್ಯೆಯ ರಿಟ್ಜ್ ಕಾರನ್ನು ಪತ್ತೆ ಹಚ್ಚುವ ಮೂಲಕ ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳು:
ನಾಗೇಶ.ಆರ್ (25): ಪರಪ್ಪನ ಅಗ್ರಹಾರ, ಬೆಂಗಳೂರು (ಕ್ಯಾಬ್ ಡ್ರೈವರ್).
ಜುಬೇರ್ ಖಾನ್ (21): ಬೆಳ್ಳಂದೂರು, ಬೆಂಗಳೂರು (ಆಟೋ ಚಾಲಕ).
ಶಶಾಂಕ್ ಎಂ.ಪಿ ಅಲಿಯಾಸ್ ಕೊತ್ತಿಮೀರಿ (26): ತಿಪಟೂರು ಟೌನ್, ತುಮಕೂರು ಜಿಲ್ಲೆ.
(ಮತ್ತೊಬ್ಬ ಆರೋಪಿ ಮರಿಲಿಂಗನಾಯಕ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ).
ವಶಪಡಿಸಿಕೊಂಡ ಮಾಲು:
ಚಿಕ್ಕಬಳ್ಳಾಪುರ ನಗರ ಠಾಣೆಯ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ 06 ಗ್ರಾಂ ಚಿನ್ನದ ಒಡವೆಗಳು.
ಚಿಂತಾಮಣಿ ಗ್ರಾಮಾಂತರ ಠಾಣೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದ 02 ಕೆಜಿ 44 ಗ್ರಾಂ ಬೆಳ್ಳಿ ಮತ್ತು 97 ಗ್ರಾಂ ಚಿನ್ನದ ವಸ್ತುಗಳು.
ಕೃತ್ಯಕ್ಕೆ ಬಳಸಿದ್ದ ರಿಟ್ಜ್ ಕಾರು (ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದು).
ಒಟ್ಟು ಅಂದಾಜು ಮೌಲ್ಯ: 17 ಲಕ್ಷ ರೂ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕುಶಲ್ ಚೌಕ್ಸಿ, ಐಪಿಎಸ್ ಮತ್ತು ಹೆಚ್ಚುವರಿ ಎಸ್ಪಿ ಶ್ರೀ ಜಗನ್ನಾಥ್ ರೈ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯನ್ನು ಚಿಕ್ಕಬಳ್ಳಾಪುರ ವೃತ್ತದ ಸಿಪಿಐ ಶ್ರೀ ರಂಜನ್ ಕುಮಾರ್.ಡಿ ಅವರ ನೇತೃತ್ವದ ತಂಡ ಯಶಸ್ವಿಯಾಗಿ ನಿರ್ವಹಿಸಿದೆ. ತಂಡದಲ್ಲಿ ಪಿಎಸ್‌ಐಗಳಾದ ದುಂಡಪ್ಪ ಬಾರ್ಕಿ, ಅಮರ್ ಎಸ್.ಎಂ, ರತ್ನಾಬಾಯಿ, ಹರೀಶ್ ಕುಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಇಡೀ ತಂಡವನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.