Share News

ಜಗಳೂರು (ದಾವಣಗೆರೆ): ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಕಂಗಾಲಾದ ರೈತರು, ಕೊತ್ತಂಬರಿ ಸೊಪ್ಪನ್ನು ರಸ್ತೆ ಬದಿಯಲ್ಲೇ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಹೊರವಲಯದಲ್ಲಿ ನಡೆದಿದೆ.

​ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದ ರೈತರು ತಾವು ಬೆಳೆದಿದ್ದ ಕೊತ್ತಂಬರಿ ಸೊಪ್ಪನ್ನು ಮಾರಾಟ ಮಾಡಲು ಜಗಳೂರು ಮಾರುಕಟ್ಟೆಗೆ ತಂದಿದ್ದರು. ಆದರೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೊತ್ತಂಬರಿ ಸೊಪ್ಪು ಖರೀದಿಸಲು ಹಿಂಜರಿದಿದ್ದಲ್ಲದೆ, ಕನಿಷ್ಠ ಬೆಲೆಯನ್ನೂ ನೀಡಲು ಮುಂದೆ ಬರಲಿಲ್ಲ. ಇದರಿಂದ ತೀವ್ರ ನಿರಾಶೆಗೊಂಡ ರೈತರು ತಮ್ಮ ಬೆಳೆಯನ್ನು ವಾಪಸ್ ಒಯ್ಯಲಾಗದೆ ರಸ್ತೆ ಬದಿಯಲ್ಲೇ ಎಸೆದು ತೆರಳಿದ್ದಾರೆ.

​ಸೊಪ್ಪಿಗಾಗಿ ಮುಗಿಬಿದ್ದ ಸಾರ್ವಜನಿಕರು:

ರೈತರು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದ ಕೊತ್ತಂಬರಿ ಸೊಪ್ಪನ್ನು ಉಚಿತವಾಗಿ ತೆಗೆದುಕೊಂಡು ಹೋಗಲು ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂದಿದೆ. ಈ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

​ನಿರಂತರ ಶ್ರಮವಹಿಸಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ರೈತರು ಬೀದಿಗೆ ಬೀಳುತ್ತಿರುವುದು, ಕೃಷಿಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಮತ್ತೊಮ್ಮೆ ಸ್ಪಷ್ಟ ಸಾಕ್ಷಿಯಾಗಿದೆ.


Share News