ವಿಜಯಪುರ: ಮದ್ಯಕ್ಕಾಗಿ ವ್ಯಸನಿಯೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ. “ಮದ್ಯ ಕೊಟ್ಟರೆ ಮಾತ್ರ ಕೆಳಗೆ ಇಳಿಯುತ್ತೇನೆ” ಎಂದು ಪಟ್ಟು ಹಿಡಿದ ವ್ಯಕ್ತಿಯ ಕೃತ್ಯದಿಂದ ಗ್ರಾಮಸ್ಥರು ಕೆಲಕಾಲ ಆತಂಕಕ್ಕೀಡಾಗಿದ್ದರು.
ಕೋಟ್ಯಾಳ ಗ್ರಾಮದ ನಿವಾಸಿ ಶ್ರೀಶೈಲ್ ಎಂಬಾತನೇ ಈ ಹೈಡ್ರಾಮಾ ಮಾಡಿದ ವ್ಯಕ್ತಿ. ತೀವ್ರ ಮದ್ಯ ವ್ಯಸನಿಯಾಗಿರುವ ಈತ, ಭಾನುವಾರ ಮಧ್ಯಾಹ್ನ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಕೆಳಗಿಳಿಯುವಂತೆ ಮನವೊಲಿಸಲು ಯತ್ನಿಸಿದಾಗ, ಆತ ಮದ್ಯದ ಬೇಡಿಕೆ ಇಟ್ಟಿದ್ದಾನೆ. ಮದ್ಯ ನೀಡದಿದ್ದರೆ ಕೆಳಕ್ಕೆ ಇಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ವಿಶೇಷವೆಂದರೆ, ಈತ ಈ ರೀತಿ ಟವರ್ ಏರುತ್ತಿರುವುದು ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳಲ್ಲಿ ಈತ ಈಗಾಗಲೇ ಎರಡು ಬಾರಿ ಇದೇ ರೀತಿ ಟವರ್ ಏರಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಪದೇ ಪದೇ ಇಂತಹ ಕೃತ್ಯಗಳನ್ನು ಮಾಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ತಿಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ವ್ಯಕ್ತಿಯನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ. ಟವರ್ ಕೆಳಗೆ ನೂರಾರು ಜನರು ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ, ಮದ್ಯ ವ್ಯಸನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಅಪಾಯಕಾರಿ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.