Share News

ಸಕಲೇಶಪುರ (ಮಾರ್ಚ್ 28, 2026): ಇಲ್ಲಿನ ಸುಂದರ ಪ್ರವಾಸಿ ತಾಣವಾದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ರೌಡಿ ವರ್ತನೆಯ ಕಿಡಿಗೇಡಿಗಳ ಗುಂಪೊಂದು ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ತಂಡದ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ದಾಳಿಯ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ಉಪಕರಣಗಳನ್ನು ಧ್ವಂಸಗೊಳಿಸಿರುವುದಲ್ಲದೆ, ಚಿನ್ನದ ಸರ ದೋಚಿರುವ ಗಂಭೀರ ಆರೋಪ ಕೇಳಿಬಂದಿದೆ.

ಹಾಸನದ ಫೋಟೋಗ್ರಾಫರ್ ನವೀನಂದನ್ ಕೆ.ಎಸ್. (21) ಅವರು ತಮ್ಮ ಸಹೋದ್ಯೋಗಿ ಚೇತನ್ ಮತ್ತು ಮದುವೆಯಾಗಲಿರುವ ಜೋಡಿಯೊಂದಿಗೆ ಬೆಳಿಗ್ಗೆ 7:30ಕ್ಕೆ ದೇವಸ್ಥಾನಕ್ಕೆ ತಲುಪಿದ್ದರು. ಸುಮಾರು 8:00 ಗಂಟೆಯ ಹೊತ್ತಿಗೆ ಬೆಂಗಳೂರಿನ ಮತ್ತೊಂದು ಫೋಟೋಗ್ರಾಫಿ ತಂಡ (ಅಭಿಷೇಕ್ ಮತ್ತು ಯಶವಂತ್) ಅಲ್ಲಿಗೆ ಆಗಮಿಸಿದೆ. ಈ ವೇಳೆ ಮಾರುಬೈಲು ಗ್ರಾಮದ ನಿವಾಸಿ ಅಭಿ ಎಂಬಾತ ಬೆಂಗಳೂರಿನ ತಂಡದ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಯಶವಂತ್ ಮೇಲೆ ಹಲ್ಲೆ ನಡೆಸಿದ್ದಾನೆ.

ಘಟನೆ ಅಲ್ಲಿಗೆ ಮುಗಿಯದೆ, ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಅಭಿ ತನ್ನ 7 ರಿಂದ 8 ಮಂದಿ ಬೆಂಬಲಿಗರೊಂದಿಗೆ ಎರಡು ಕಾರುಗಳಲ್ಲಿ (KA22 MA 2209 ಮತ್ತು KA10 M 3121) ಸ್ಥಳಕ್ಕೆ ಮರಳಿ ಬಂದಿದ್ದಾನೆ. ದೂರಿನಲ್ಲಿ ಉಲ್ಲೇಖಿಸಿರುವಂತೆ ಪ್ರಶಾಂತ್, ರಕ್ಷಯ್, ಅರವಿಂದ್, ಉಚಿತ್, ಪ್ರಜ್ವಲ್ ಮತ್ತು ನಿಶಾಂತ್ ಎಂಬುವವರು ಮರದ ದೊಣ್ಣೆ ಹಾಗೂ ಕಲ್ಲುಗಳಿಂದ ಫೋಟೋಗ್ರಾಫರ್‌ಗಳ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾರೆ.

ದಾಳಿಕೋರರು ನನ್ನ ಕುತ್ತಿಗೆಗೆ ಕೈ ಹಾಕಿ ಉಸಿರುಗಟ್ಟಿಸಲು ಯತ್ನಿಸಿ, ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ವೃತ್ತಿಪರ ಶೂಟಿಂಗ್‌ಗಾಗಿ ಬಳಸುತ್ತಿದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಮತ್ತು ಲೆನ್ಸ್‌ಗಳನ್ನು ನೆಲಕ್ಕೆ ಅಪ್ಪಳಿಸಿ ಪುಡಿ ಮಾಡಿದ್ದಾರೆ” ಎಂದು ನವೀನಂದನ್ ದೂರಿನಲ್ಲಿ ತಿಳಿಸಿದ್ದಾರೆ.

ಗಾಯಗೊಂಡ ಫೋಟೋಗ್ರಾಫರ್‌ಗಳು ಸದ್ಯ ಹಾಸನ ಜಿಲ್ಲಾಸ್ಪತ್ರೆ ಮತ್ತು ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಂಟು ಮಂದಿ ಆರೋಪಿಗಳ ವಿರುದ್ಧ ಕ್ರೈಂ ಸಂಖ್ಯೆ: 49/2026 ರ ಅಡಿಯಲ್ಲಿ ವಿವಿಧ ಬಿಎನ್‌ಎಸ್ (BNS) ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ:

ಸೆಕ್ಷನ್ 189(1), 191(1): ಕಾನೂನುಬಾಹಿರವಾಗಿ ಗುಂಪುಗೂಡುವುದು ಮತ್ತು ದಂಗೆ.

ಸೆಕ್ಷನ್ 115(2): ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು.

ಸೆಕ್ಷನ್ 126(2): ಅಕ್ರಮ ತಡೆ ಹಿಡಿಯುವುದು.

ಸೆಕ್ಷನ್ 352 ಮತ್ತು 351(2): ಕ್ರಿಮಿನಲ್ ಬೆದರಿಕೆ ಮತ್ತು ಹಲ್ಲೆ.

ಸೆಕ್ಷನ್ 324(5): ಆಸ್ತಿಪಾಸ್ತಿಗೆ ಹಾನಿ.

ಪ್ರವಾಸಿ ತಾಣಗಳಲ್ಲಿ ಇಂತಹ ಪುಂಡಾಟಿಕೆಗಳು ಹೆಚ್ಚುತ್ತಿರುವುದಕ್ಕೆ ಸ್ಥಳೀಯ ಛಾಯಾಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂಟಿಂಗ್‌ಗೆ ಬರುವವರಿಗೆ ಮತ್ತು ಕಲಾವಿದರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವರದಿ :- ಗಿಲ್ಬರ್ಟ್. ಜೆ


Share News