Share News

ಲಕ್ನೋ/ಪೂರ್ಣಿಯಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯವರ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ಬಿಹಾರದ ಪ್ರಭಾವಿ ಧರ್ಮಗುರು ಮೌಲಾನಾ ಅಬ್ದುಲ್ಲಾ ಸಲೀಂ ಚತುರ್ವೇದಿ ಅವರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಸೋಮವಾರ ತಡರಾತ್ರಿ ಬಂಧಿಸಿದೆ.

ಇತ್ತೀಚೆಗೆ ಬಿಹಾರದಲ್ಲಿ ನಡೆದಿದ್ದ ಧಾರ್ಮಿಕ ಸಭೆಯೊಂದರಲ್ಲಿ ಮೌಲಾನಾ ಅಬ್ದುಲ್ಲಾ ಸಲೀಂ ಭಾಷಣ ಮಾಡಿದ್ದರು. ಈ ವೇಳೆ ಯುಪಿ ಮುಖ್ಯಮಂತ್ರಿಯವರ ತಾಯಿಯನ್ನು ಉಲ್ಲೇಖಿಸಿ ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿದ್ದರು. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಉತ್ತರ ಪ್ರದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ವಿವಾದಾತ್ಮಕ ಹೇಳಿಕೆ ಸಂಬಂಧ ಉತ್ತರ ಪ್ರದೇಶದ ಬಲರಾಂಪುರ, ಬಸ್ತಿ, ಸೀತಾಪುರ ಮತ್ತು ಕಾನ್ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ದ್ವೇಷ ಉತ್ತೇಜಿಸುವುದು (ಸೆಕ್ಷನ್ 196(1)(a)), ಧಾರ್ಮಿಕ ಭಾವನೆ ಕೆರಳಿಸುವುದು (299) ಮತ್ತು ಸುಳ್ಳು ಮಾಹಿತಿ ಪ್ರಸರಣ (353(1)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಸದ ರವಿ ಕಿಶನ್ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, “ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ದೈವತ್ವದ ಸ್ಥಾನವಿದೆ, ಇಂತಹ ಕೀಳು ಮಟ್ಟದ ಹೇಳಿಕೆಗಳು ಸಹನೀಯವಲ್ಲ” ಎಂದು ಕಿಡಿಕಾರಿದ್ದಾರೆ. ವಿಎಚ್‌ಪಿ ನಾಯಕರು ಮೌಲಾನಾ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಬಿಹಾರದ ಅರಾರಿಯಾ ಜಿಲ್ಲೆಯ ಜೋಕಿಹತ್ ಮೂಲದ ಮೌಲಾನಾ ಅಬ್ದುಲ್ಲಾ ಸಲೀಂ ಒಬ್ಬ ಪ್ರಭಾವಿ ಇಸ್ಲಾಮಿಕ್ ಭಾಷಣಕಾರ. ಕುರಾನ್ ಜೊತೆಗೆ ಭಗವದ್ಗೀತೆ ಮತ್ತು ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುತ್ತಿದ್ದ ಕಾರಣ ಇವರನ್ನು ‘ಚತುರ್ವೇದಿ’ ಎಂಬ ಬಿರುದಿನಿಂದಲೂ ಗುರುತಿಸಲಾಗುತ್ತಿತ್ತು.

​ಸದ್ಯ ಬಿಹಾರದ ಪೂರ್ಣಿಯಾದಲ್ಲಿ ವಶಕ್ಕೆ ಪಡೆದ ಎಸ್‌ಟಿಎಫ್ ಅಧಿಕಾರಿಗಳು, ಹೆಚ್ಚಿನ ಕಾನೂನು ಪ್ರಕ್ರಿಯೆಗಾಗಿ ಆರೋಪಿಯನ್ನು ಉತ್ತರ ಪ್ರದೇಶಕ್ಕೆ ಕರೆತಂದಿದ್ದಾರೆ.


Share News