ಗದಗ: ಜಿಲ್ಲೆಯ ಹುಯಿಲಗೋಳ ಗ್ರಾಮದ ಹಳ್ಳದ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನ ಶವದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಇದು ಕೇವಲ ಸಾವಲ್ಲ, ಪೂರ್ವ ನಿಯೋಜಿತ ಸಂಚು ರೂಪಿಸಿ ನಡೆಸಿದ ಭೀಕರ ಹತ್ಯೆ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಕೊಲೆಯಾದ ಯುವಕನನ್ನು ಚಂದ್ರು ಕುರಿ ಎಂದು ಗುರುತಿಸಲಾಗಿದೆ. ಈತನಿಗೂ ಮತ್ತು ಅದೇ ಗ್ರಾಮದ ರತ್ನಾ ಅಲಿಯಾಸ್ ರಾಮವ್ವ ಎಂಬಾಕೆಗೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ವಿಷಯ ರತ್ನಾಳ ಪತಿ ಈರಪ್ಪನಿಗೆ ತಿಳಿದು ಮನೆಯಲ್ಲಿ ಜಗಳ ಆರಂಭವಾಗಿತ್ತು. ಕೊನೆಗೆ ಪತ್ನಿ, ಪತಿ ಹಾಗೂ ಆಕೆಯ ಸಹೋದರ ಸೇರಿ ಚಂದ್ರು ಸಂಹರಿಸಲು ಸ್ಕೆಚ್ ಹಾಕಿದ್ದರು.
ಸಂಚಿನ ಪ್ರಕಾರ, ರತ್ನಾ ಫೋನ್ ಮಾಡಿ ಚಂದ್ರುನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಚಂದ್ರು ಅಲ್ಲಿಗೆ ಬರುತ್ತಿದ್ದಂತೆಯೇ ಹೊಂಚು ಹಾಕಿ ಕುಳಿತಿದ್ದ ರತ್ನಾಳ ಪತಿ ಈರಪ್ಪ ಮತ್ತು ಆಕೆಯ ಸಹೋದರ ಮಹಾಂತೇಶ್ ಆತನ ಮೇಲೆ ದಾಳಿ ಮಾಡಿದ್ದಾರೆ. ಹಳ್ಳದ ಬಳಿ ಚಂದ್ರುನ ಕತ್ತು ಕೊಯ್ದು ಹತ್ಯೆ ಮಾಡಿದ ಆರೋಪಿಗಳು, ಗುರುತು ಸಿಗದಂತೆ ಮಾಡಲು ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ:
A-1: ಈರಪ್ಪ (ಪತಿ)
A-2: ಮಹಾಂತೇಶ್ (ರತ್ನಾಳ ಸಹೋದರ)
A-3: ರತ್ನಾ ಅಲಿಯಾಸ್ ರಾಮವ್ವ (ಪ್ರಿಯತಮೆ)
ಬಂಧಿತ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಗದಗ ಗ್ರಾಮೀಣ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ವರದಿ :- ಗಿಲ್ಬರ್ಟ್. ಜೆ