Share News

ಚನ್ನರಾಯಪಟ್ಟಣ: ತನಗೆ 40 ವರ್ಷ ವಯಸ್ಸಾದರೂ ಮದುವೆ ಮಾಡಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ, ಮಗನೊಬ್ಬನೇ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿರುವ ಘನಘೋರ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ನಿವಾಸಿ ಗಂಗಮ್ಮ (65) ಹಲ್ಲೆಗೊಳಗಾದ ದುರ್ದೈವಿ ತಾಯಿ. ಇವರ ಎರಡನೇ ಮಗ ಉಮಾಶಂಕರ್ (40) ಎಂಬಾತನೇ ಈ ಕೃತ್ಯ ಎಸಗಿದ ಪಾಪಿ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಗಂಗಮ್ಮ ಅವರು ಸದ್ಯ ಹಾಸನದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆರೋಪಿ ಉಮಾಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ, ಉಮಾಶಂಕರ್ ಕಳೆದ ವರ್ಷ ಅಪಘಾತಕ್ಕೀಡಾಗಿ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಔಷಧಿ ಸೇವಿಸದ ಕಾರಣ ಈತನ ಮಾನಸಿಕ ಸ್ಥಿತಿ ಏರುಪೇರಾಗಿತ್ತು ಎನ್ನಲಾಗಿದೆ. “ನನಗೆ ಮದುವೆ ಮಾಡಿ” ಎಂದು ಈತ ಸದಾ ಮನೆಯವರನ್ನು ಪೀಡಿಸುತ್ತಿದ್ದನು. ಆದರೆ ಈತನ ಅನಾರೋಗ್ಯದ ಕಾರಣದಿಂದಾಗಿ ಯಾರೂ ಹೆಣ್ಣು ಕೊಡಲು ಮುಂದಾಗುತ್ತಿರಲಿಲ್ಲ ಎನ್ನಲಾಗಿದೆ.

ಘಟನೆಯ ದಿನ ಮನೆಯಲ್ಲಿ ಮದುವೆಯ ವಿಚಾರವಾಗಿ ತಾಯಿ-ಮಗನ ನಡುವೆ ತೀವ್ರ ಜಗಳ ನಡೆದಿದೆ. ಆಕ್ರೋಶಗೊಂಡ ಉಮಾಶಂಕರ್ ತಾಯಿಯನ್ನು ಬಲವಾಗಿ ತಳ್ಳಿದ್ದಾನೆ. ಗಂಗಮ್ಮ ಅವರು ಸಮೀಪದ ಜಮೀನಿಗೆ ಬಿದ್ದಾಗ, ರಕ್ಕಸನಂತೆ ವರ್ತಿಸಿದ ಮಗ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ತಾಯಿಯ ತಲೆಗೆ ಹಾಕಿ ಕೊಲೆಗೆ ಯತ್ನಿಸಿದ್ದಾನೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ ಹಾಗೂ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Share News