ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಉಂಟಾಗಿದ್ದ ಕುತೂಹಲಕ್ಕೆ ತೆರೆ ಬಿದ್ದಿದ್ದು, ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ, ನಟ ದಳಪತಿ ವಿಜಯ್ ಅವರು ಮ್ಯಾಜಿಕ್ ನಂಬರ್ ಸಾಧಿಸುವ ಮೂಲಕ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಲು ಸಜ್ಜಾಗಿದ್ದಾರೆ.
ಚುನಾವಣೆಯಲ್ಲಿ 107 ಸ್ಥಾನಗಳನ್ನು ಗೆದ್ದಿದ್ದ ಟಿವಿಕೆ ಪಕ್ಷಕ್ಕೆ ಬಹುಮತಕ್ಕೆ ಅಲ್ಪ ಹಿನ್ನಡೆಯಾಗಿತ್ತು. ಆದರೆ, ಇದೀಗ ಸಿಪಿಐ (2), ಸಿಪಿಎಂ (2), ವಿಸಿಕೆ (2) ಮತ್ತು ಕಾಂಗ್ರೆಸ್ (5) ಪಕ್ಷಗಳು ವಿಜಯ್ ಅವರಿಗೆ ಬೆಂಬಲ ಸೂಚಿಸಿವೆ. ಈ ಮೂಲಕ ಒಟ್ಟು 118 ಸ್ಥಾನಗಳ ಬೆಂಬಲದೊಂದಿಗೆ ವಿಜಯ್ ಅವರು ಮ್ಯಾಜಿಕ್ ನಂಬರ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಅಗತ್ಯ ಬಹುಮತದ ದಾಖಲೆಗಳೊಂದಿಗೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಪಾಲರು ಸರ್ಕಾರ ರಚನೆಗೆ ಅಧಿಕೃತ ಒಪ್ಪಿಗೆ ನೀಡಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರು ಇವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ತಮಿಳುನಾಡು ಕಾತರದಿಂದ ಕಾಯುತ್ತಿದೆ. ದಶಕಗಳ ಕಾಲ ಚಿತ್ರರಂಗ ಆಳಿದ್ದ ‘ದಳಪತಿ’ ಇನ್ನು ಮುಂದೆ ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.