Share News

ಕೊಯಂಬತ್ತೂರು: ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಘೋರ ಘಟನೆಯೊಂದು ನಡೆದಿದೆ. ತಾಯಿ ಹೇಳಿದಳು ಎಂದು ಸಾಮಾನು ತರಲು ಅಂಗಡಿಗೆ ತೆರಳಿದ್ದ 10 ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯಿಂದ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತೀವ್ರ ಆಕ್ರೋಶಗೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.

ಕೊಯಂಬತ್ತೂರಿನ ಸುಲೂರು ಮೂಲದ 5ನೇ ತರಗತಿ ವಿದ್ಯಾರ್ಥಿನಿ ಗುರುವಾರ ಸಂಜೆ ಮನೆಯ ಬಳಿ ಆಟವಾಡುತ್ತಾ ಕಿರಾಣಿ ಸಾಮಾನು ತರಲು ಅಂಗಡಿಗೆ ತೆರಳಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಮತ್ತು ಪೊಲೀಸರು ವ್ಯಾಪಕ ಹುಡುಕಾಟ ನಡೆಸಿದ ನಂತರ, ಶುಕ್ರವಾರ ಸಂಜೆ ಸುಲೂರಿನ ಕೆರೆಯ ದಂಡೆಯ ಮೇಲೆ ಆಕೆಯ ಮೃತದೇಹ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

​ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ (33) ಮತ್ತು ಮೋಹನ್ ರಾಜ್ ಎಂಬ ಇಬ್ಬರು ಕಾಮುಕರನ್ನು ಪೊಲೀಸರು ಶನಿವಾರ ಮುಂಜಾನೆ ಬಂಧಿಸಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಆಯಾಮದಲ್ಲೂ ವೈದ್ಯಕೀಯ ತಪಾಸಣೆಯೊಂದಿಗೆ ತನಿಖೆ ಮುಂದುವರಿದಿದೆ.

ಬಾಲಕಿಯ ಭೀಕರ ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಮತ್ತು ಮೃತಳ ಸಂಬಂಧಿಕರು ರೊಚ್ಚಿಗೆದ್ದಿದ್ದಾರೆ. ಸುಲೂರು ಪೊಲೀಸ್ ಠಾಣೆಯ ಮುಂದೆ ತಿರುಚಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಶನಿವಾರ ಮುಂಜಾನೆ 5 ಗಂಟೆಯವರೆಗೆ ಸತತ 8 ಗಂಟೆಗಳ ಕಾಲ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ.

​”ನಾವು ರಾಜ್ಯದಲ್ಲಿ ಬದಲಾವಣೆ ತರಲು ವೋಟ್ ಹಾಕಿದ್ದೆವು, ಹೊಸ ಸರ್ಕಾರದಿಂದ ನಮಗೆ ಸುರಕ್ಷತೆಯ ಭರವಸೆ ಬೇಕು. ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡುವವರೆಗೂ ನಾವು ಮೃತದೇಹವನ್ನು ಪಡೆಯುವುದಿಲ್ಲ,” ಎಂದು ಬಾಲಕಿಯ ಕುಟುಂಬಸ್ಥರು ಕಣ್ಣೀರಿಡುತ್ತಾ ಪಟ್ಟು ಹಿಡಿದಿದ್ದರು.

ಸಾರ್ವಜನಿಕ ಆಕ್ರೋಶ ಮತ್ತು ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

​ಮುಖ್ಯಮಂತ್ರಿಯವರ ಖಡಕ್ ಸಂದೇಶ: “ಕೊಯಮತ್ತೂರಿನಲ್ಲಿ 10 ವರ್ಷದ ಬಾಲಕಿಗೆ ನಡೆದಿರುವ ಈ ಭೀಕರ ಘಟನೆ ನನಗೆ ತೀವ್ರ ಆಘಾತ ಮತ್ತು ಅಪಾರ ದುಃಖವನ್ನು ಉಂಟುಮಾಡಿದೆ. ಇಂತಹ ಅಮಾನವೀಯ ಮತ್ತು ಕ್ಷಮಿಸಲಾಗದ ಕ್ರಿಮಿನಲ್ ಕೃತ್ಯಗಳನ್ನು ನಮ್ಮ ಸಮಾಜದಲ್ಲಿ ಎಂದಿಗೂ ಸಹಿಸಲು ಸಾಧ್ಯವಿಲ್ಲ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವುದು ಖಂಡಿತ.”

​ಅಲ್ಲದೆ, ತಮಿಳುನಾಡು ಡಿಜಿಪಿ ಸಂದೀಪ್ ರೈ ರಾಥೋಡ್ ಅವರಿಗೆ ತಕ್ಷಣವೇ ಕೊಯಮತ್ತೂರಿಗೆ ಧಾವಿಸಿ ತನಿಖೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಲು ಸಿಎಂ ಸೂಚಿಸಿದ್ದಾರೆ.

ವರದಿ :- ಗಿಲ್ಬರ್ಟ್. ಜೆ


Share News