ಬೆಳಗಾವಿ: ರೈತರ ಜಮೀನುಗಳಲ್ಲಿ ಅಳವಡಿಸಿದ್ದ ಮೋಟಾರ್ ಪಂಪ್ ಹಾಗೂ ಕೇಬಲ್ ವೈರ್‌ಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ್ತ ಇಬ್ಬರನ್ನು ಮಾರಿಹಾಳ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ರೂ. 3,60,000/- ಮೌಲ್ಯದ 12 ಮೋಟಾರ್ ಪಂಪ್‌ಗಳು, 300 ಮೀಟರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಗುಡದಪ್ಪ ನಿಂಗಪ್ಪ ತಳವಾರ (36, ಸಾ: ತುಮ್ಮರಗುದ್ದಿ) ಮತ್ತು ಕಲ್ಲಪ್ಪ ಲಕ್ಕಪ್ಪ ನಾಯಕ (42, ಸಾ: ಕರಿಕಟ್ಟಿ) ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ:
ಅಕ್ಟೋಬರ್ 15, 2026ರಂದು ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹುದಲಿ ಗ್ರಾಮದ ಸರ್ವೆ ನಂ. 70/5ರ ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಅಳವಡಿಸಿದ್ದ 20,000 ರೂ. ಮೌಲ್ಯದ ಟೆಕ್ಸಮೋ ಕಂಪನಿಯ 5 ಎಚ್‌ಪಿ ಮೋಟಾರ್ ಪಂಪ್ ಹಾಗೂ ಸುತ್ತಮುತ್ತಲಿನ ರೈತರ ಪಂಪ್‌ಗಳು ಕಳ್ಳತನವಾಗಿರುವ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 151/2026, ಕಲಂ: 303(2) BNS-2023) ಪ್ರಕರಣ ದಾಖಲಾಗಿ ತನಿಖೆ ನಡೆದಿತ್ತು.
ಪೊಲೀಸ್ ಕಾರ್ಯಾಚರಣೆ ಮತ್ತು ಬಂಧನ:
ಮಾನ್ಯ ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಅಕ್ಟೋಬರ್ 22ರ ಮಧ್ಯಾಹ್ನ ಮಾರಿಹಾಳ-ತುಮ್ಮರಗುದ್ದಿ ರಸ್ತೆಯಲ್ಲಿ ಬೈಕ್‌ನಲ್ಲಿ ಚೀಲದಲ್ಲಿ ಮೋಟಾರ್ ಪಂಪ್ ಇಟ್ಟುಕೊಂಡು ಸಾಗುತ್ತಿದ್ದ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ.
ಈ ವೇಳೆ ಆರೋಪಿಗಳು ಹುದಲಿ, ತುಮ್ಮರಗುದ್ದಿ, ಮಾರಿಹಾಳ, ಖನಗಾಂವ, ರಂಗದೊಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೋಟಾರ್ ಪಂಪ್ ಹಾಗೂ ಕೇಬಲ್ ವೈರ್‌ಗಳನ್ನು ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಅವರ ಮಾಹಿತಿ ಮೇರೆಗೆ ಒಟ್ಟು 3.60 ಲಕ್ಷ ರೂ. ಮೌಲ್ಯದ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಸಿಬ್ಬಂದಿಯ ಶ್ರಮ ಹಾಗೂ ಪ್ರಶಂಸೆ:
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಐ ಶ್ರೀ ಆಯ್.ಆರ್. ಪಟ್ಟಣಶೆಟ್ಟಿ, ಪಿಎಸ್‌ಐ ಶ್ರೀ ಚಂದ್ರಶೇಖರ ಸಿ., ಹಾಗೂ ಸಿಬ್ಬಂದಿಗಳಾದ ಬಿ.ಬಿ. ಕಡ್ಡಿ, ಆರ್.ಎಸ್. ಬಳುಂಡಗಿ, ಆರ್.ಎಚ್. ತಳವಾರ, ಟಿ.ಜಿ. ಸುಳಕೋಡ, ಆರ್.ಬಿ. ಕುರುಬರ, ಆರ್.ಎಸ್. ತಳೇವಾಡ ಹಾಗೂ ಆರ್.ಎಸ್. ಪಾಟೀಲ್ ಅವರ ಕರ್ತವ್ಯದಕ್ಷತೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರುಗಳು ವಿಶೇಷವಾಗಿ ಶ್ಲಾಘಿಸಿದ್ದಾರೆ.
Arakshakara Times Media
Related posts
