Share News

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಜ್ಞಾಪನ ಮತ್ತು ಸುತ್ತೋಲೆ ಹೊರಡಿಸಲು ಮಾನ್ಯ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

​ರಾಜ್ಯ ಪೊಲೀಸ್ ಇಲಾಖೆಯು ಅತ್ಯಂತ ಶಿಸ್ತಿನ ಇಲಾಖೆಯಾಗಿದ್ದು, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಹಾಗೂ ಸಂಚಾರ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಸಂಚಾರ ನಿಯಮ ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಸ್ವತಃ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

​ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ:

​ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳು ಸಮವಸ್ತ್ರದಲ್ಲೇ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಚಾಲನೆ ವೇಳೆ ಮೊಬೈಲ್ ಬಳಕೆ, ಟ್ರಿಪಲ್ ರೈಡಿಂಗ್, ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು, ಒನ್ ವೇ ಹಾಗೂ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಮತ್ತು ಕಾರು ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದಿರುವುದು ಕಂಡುಬರುತ್ತಿದೆ.

​ಈ ಉಲ್ಲಂಘನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಸಾರ್ವಜನಿಕರಿಗೊಂದು ಕಾನೂನು, ಪೊಲೀಸರಿಗೊಂದು ಕಾನೂನೇ?”, “ಕಾನೂನು ರಕ್ಷಕರೇ ಭಕ್ಷಕರು”, “ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸರಿಗೆ ದಂಡ ಹಾಕುವವರು ಯಾರು?” ಎಂದು ಸಾರ್ವಜನಿಕರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇದು ಇಲಾಖೆಯ ಘನತೆಗೆ ಧಕ್ಕೆ ತರುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

​”ಪೊಲೀಸರು ಶಿಸ್ತು ಪಾಲಿಸದಿದ್ದರೆ ಸಾರ್ವಜನಿಕರಿಗೆ ಹೇಳುವ ಹಕ್ಕಿಲ್ಲ”

“ಕಾನೂನು ಜಾರಿಗೊಳಿಸುವ ಪೊಲೀಸರೇ ಸಂಚಾರ ನಿಯಮಗಳನ್ನು ಪಾಲಿಸದೇ ಇದ್ದರೆ, ಸಾರ್ವಜನಿಕರಿಂದ ನಿಯಮ ಪಾಲನೆ ನಿರೀಕ್ಷಿಸುವುದು ಕಷ್ಟಸಾಧ್ಯ. ಅಷ್ಟೇ ಅಲ್ಲದೆ, ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸಿ ಎಂದು ಹೇಳುವ ನೈತಿಕ ಹಕ್ಕನ್ನೂ ಪೊಲೀಸರು ಕಳೆದುಕೊಳ್ಳುತ್ತಾರೆ. ಈ ಹಿಂದೆ ಬೆಂಗಳೂರು ಹಾಗೂ ಕಲಬುರಗಿ ಕಮಿಷನರೇಟ್‌ಗಳಿಂದ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಉಲ್ಲಂಘನೆಗಳು ಮುಂದುವರಿದಿವೆ.”

ಮೋಹನ್ ಕುಮಾರ್ ದಾನಪ್ಪ, ಸದಸ್ಯರು, ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ

​ಪ್ರತಿದಿನದ ‘ರೋಲ್ ಕಾಲ್’ನಲ್ಲಿ ಜಾಗೃತಿ ಮೂಡಿಸಲು ಆಗ್ರಹ:

​ಈ ಎಲ್ಲಾ ಅಂಶಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಂಚಾರ ವಿಭಾಗ ಸೇರಿದಂತೆ ರಾಜ್ಯದ ಎಲ್ಲಾ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಈ ಬಗ್ಗೆ ಎಲ್ಲಾ ಅಧೀನ ಸಿಬ್ಬಂದಿಗಳಿಗೆ ಪ್ರತಿದಿನ ಬೆಳಗಿನ ‘ರೋಲ್ ಕಾಲ್’ (Roll Call) ವೇಳೆಯಲ್ಲಿ ಕಟ್ಟುನಿಟ್ಟಾಗಿ ತಿಳಿಹೇಳುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ತಕ್ಷಣ ಸೂಕ್ತ ಆದೇಶ ಹಾಗೂ ಸುತ್ತೋಲೆ ಹೊರಡಿಸಬೇಕೆಂದು ಕೋರಲಾಗಿದೆ.


Share News