Share News

ಹಮೀರ್‌ಪುರ: ಭಾರಿ ಮೊತ್ತದ ವಿಮಾ ಹಣವನ್ನು ಕಬಳಿಸುವ ದುರಾಶೆಯಿಂದ ಪತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದು, ಹಿಟ್ ಅಂಡ್ ರನ್ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಭೀಕರ ಘಟನೆ ಹಮೀರ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

​ಕಾನ್ಪುರ ಮೂಲದ ರೀತಾ ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಅಮರ್ ಸಿಂಗ್ ಹಾಗೂ ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

​ಘಟನೆಯ ಹಿನ್ನೆಲೆ:

ಪೋಲೀಸರ ತನಿಖಾ ವರದಿಯ ಪ್ರಕಾರ, ಆರೋಪಿ ಅಮರ್ ಸಿಂಗ್ ದೊಡ್ಡ ಮಟ್ಟದ ಸಾಲದಲ್ಲಿದ್ದನು. ಸಾಲ ತೀರಿಸಲು ಪತ್ನಿಯ ಹೆಸರಿನಲ್ಲಿದ್ದ ₹44 ಲಕ್ಷ ಮೊತ್ತದ ಲೈಫ್ ಇನ್ಶೂರೆನ್ಸ್ ಹಣವನ್ನು ಕಬಳಿಸಲು ಈ ಭೀಕರ ಸಂಚು ರೂಪಿಸಿದ್ದನು. ಕೊಲೆ ನಡೆಯುವುದಕ್ಕೆ ಕೇವಲ ಎರಡು ತಿಂಗಳ ಮುಂಚೆಯಷ್ಟೇ ಆಕೆಯ ಹೆಸರಿನಲ್ಲಿ ವಿಮಾ ಪಾಲಿಸಿ ಪಡೆದು, ₹2.60 ಲಕ್ಷ ಮೊದಲ ಕಂತನ್ನು ಪಾವತಿಸಿದ್ದನು.

​ಸಂಚು ಕಾರ್ಯಗತಗೊಳಿಸಿದ ರೀತಿ:

ತುರ್ತು ಕೆಲಸವಿದೆ ಎಂದು ನಂಬಿಸಿ ಪತ್ನಿ ರೀತಾರನ್ನು ಬೌಧಿಯಾ ಗ್ರಾಮದ ಬಳಿಯ ನಿರ್ಜನ ಕಾಲುವೆ ರಸ್ತೆಗೆ ಕರೆದೊಯ್ದಿದ್ದನು. ಮುಂಚಿತವಾಗಿಯೇ ಕಾರಿನೊಂದಿಗೆ ಕಾಯುತ್ತಿದ್ದ ಆತನ ಸ್ನೇಹಿತರಾದ ಅಮಿತ್ ಗುಪ್ತಾ, ಪುಷ್ಪೇಂದ್ರ ಸೋನಿ ಮತ್ತು ಅಭಯ್ ಸಿಂಗ್, ರೀತಾ ಅವರ ಮೇಲೆ ಕಾರನ್ನು ವೇಗವಾಗಿ ಚಲಾಯಿಸಿ ಡಿಕ್ಕಿ ಹೊಡೆಸಿದ್ದಾರೆ. ಡಿಕ್ಕಿಯ ರಭಸಕ್ಕೆ ರಸ್ತೆಬದಿಯ ತಗ್ಗಿಗೆ ಬಿದ್ದ ಆಕೆಯ ಮೇಲೆ ಮರದ ದಿಮ್ಮಿಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

​ಬಳಿಕ, ಇದನ್ನು ಕೇವಲ ರಸ್ತೆ ಅಪಘಾತ ಎಂದು ತೋರಿಸಲು ಹಾಗೂ ಆಕೆ ಬದುಕಿ ಉಳಿಯಬಾರದೆಂಬ ಉದ್ದೇಶದಿಂದ, ಗಾಯಗೊಂಡಿದ್ದ ರೀತಾರನ್ನು ಮತ್ತೆ ರಸ್ತೆಗೆ ಎಳೆದು ತಂದು ಆಕೆಯ ದೇಹದ ಮೇಲೆ ಎರಡು ಬಾರಿ ಕಾರನ್ನು ಹತ್ತಿಸಿ ಇಳಿಸಿ ಹತ್ಯೆಗೈದಿದ್ದಾರೆ.

​ಠಾಣೆಗೆ ಹೋಗಿ ನಾಟಕವಾಡಿದ್ದ ಪತಿ:

ಹತ್ಯೆಯ ನಂತರ ಯಾರಿಗೂ ಅನುಮಾನ ಬಾರದಂತೆ ಅಮರ್ ಸಿಂಗ್ ತಾನೇ ಪೋಲೀಸ್ ಠಾಣೆಗೆ ತೆರಳಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಆದರೆ ವಿಚಾರಣೆ ವೇಳೆ ಆತನ ನಡವಳಿಕೆ ಹಾಗೂ ವಿರೋಧಾತ್ಮಕ ಹೇಳಿಕೆಗಳಿಂದ ಅನುಮಾನಗೊಂಡ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ನಿಜಸಂಗತಿ ಹೊರಬಿದ್ದಿದೆ.

​ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರೀತಾರ ದೇಹದ ಮೇಲೆ 12ಕ್ಕೂ ಹೆಚ್ಚು ತೀವ್ರ ಗಾಯಗಳಾಗಿದ್ದು, ಮೂತ್ರಪಿಂಡಗಳನ್ನು ಹೊರತುಪಡಿಸಿ ಉಳಿದೆಲ್ಲಾ ಆಂತರಿಕ ಅಂಗಾಂಗಗಳು ಜಜ್ಜಲ್ಪಟ್ಟಿದ್ದವು ಎಂದು ವೈದ್ಯರು ದೃಢಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


Share News