ಹೊಸಕೋಟೆ: ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿ ಮೊಬೈಲ್ ಕಳ್ಳತನ ಮಾಡುವುದನ್ನು ಕಲಿತುಕೊಂಡಿದ್ದ ಒಡಿಶಾ ಮೂಲದ ಕುಖ್ಯಾತ ಕಳ್ಳನೊಬ್ಬನನ್ನು ಹೊಸಕೋಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾ ಮೂಲದ 30 ವರ್ಷದ ಶುಭಂ ಸೇನಾಪತಿ ಬಂಧಿತ ಆರೋಪಿಯಾಗಿದ್ದಾನೆ.
ಕೃತ್ಯದ ಹಿನ್ನೆಲೆ:
ಆರೋಪಿ ಶುಭಂ ಸೇನಾಪತಿ ಅಕ್ಟೋಬರ್ 12ರಂದು ರಾತ್ರಿ ಹೊಸಕೋಟೆಯ ‘ದುರ್ಗಾ ಮೊಬೈಲ್’ ಅಂಗಡಿಗೆ ಕನ್ನ ಹಾಕಿದ್ದನು. ಕಳ್ಳತನ ಮಾಡುವ ಮುನ್ನ ಯಾರ ಗಮನಕ್ಕೂ ಬರದಂತೆ ಅಂಗಡಿಯ ಮುಂದೆ ಟಾರ್ಪಲ್ ಕಟ್ಟಿದ್ದ. ನಂತರ ಆನ್ಲೈನ್ನಲ್ಲಿ ಖರೀದಿಸಿದ್ದ ಗ್ಯಾಸ್ ಕಟ್ಟರ್ ಬಳಸಿ ರೋಲಿಂಗ್ ಶಟರ್ ಮುರಿದು ಒಳನುಗ್ಗಿದ್ದನು. ಅಂಗಡಿಯಲ್ಲಿದ್ದ ವಿವಿಧ ಬ್ರ್ಯಾಂಡ್ಗಳ ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಮೊಬೈಲ್ಗಳನ್ನು ದೋಚಿ ಪರಾರಿಯಾಗಿದ್ದನು.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ:
ಅಂಗಡಿಯಲ್ಲಿ ನಡೆದ ಕಳ್ಳತನದ ಸಂಪೂರ್ಣ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡ ಹೊಸಕೋಟೆ ಪೊಲೀಸರು, ಅತ್ಯಂತ ಚಾಣಕ್ಷತನದಿಂದ ಕಾರ್ಯಾಚರಣೆ ನಡೆಸಿ ಆರೋಪಿ ಶುಭಂ ಸೇನಾಪತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಕಳ್ಳತನ ಮಾಡಲಾಗಿದ್ದ ಅಳಿವಿಲ್ಲದ ಒಟ್ಟು 15 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ ಮೊಬೈಲ್ಗಳನ್ನು ಪೊಲೀಸರು ಸಂಪೂರ್ಣವಾಗಿ ಜಪ್ತಿ ಮಾಡಿಕೊಂಡಿದ್ದಾರೆ. ಯೂಟ್ಯೂಬ್ ನೋಡಿ ವೃತ್ತಿಪರ ಕಳ್ಳರಂತೆ ಕೃತ್ಯವೆಸಗುತ್ತಿದ್ದ ಖತರ್ನಾಕ್ ಕಳ್ಳನನ್ನು ಹೊಸಕೋಟೆ ಪೊಲೀಸರು ಕಟಕಟೆಗೆೆ ಎಳೆತಂದಿದ್ದಾರೆ.
ವರದಿ : ಶಶಿ ಕುಮಾರ್

Arakshakara Times Media
Related posts
