Share News

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

​ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜುಲೈ 11 ಹಾಗೂ ಜುಲೈ 14ರಂದು ಅಲ್ಯೂಮಿನಿಯಂ ಕೇಬಲ್‌ಗಳು ಕಳುವಾಗಿರುವ ಕುರಿತು ದೂರುಗಳು ದಾಖಲಾಗಿದ್ದವು.

​ಕಳವಾಗಿದ್ದ ಬೃಹತ್ ಕೇಬಲ್: ಮೊದಲ ಪ್ರಕರಣದಲ್ಲಿ ಸುಮಾರು 600 ಮೀಟರ್ ಹಾಗೂ ಎರಡನೇ ಪ್ರಕರಣದಲ್ಲಿ ಸುಮಾರು 6,000 ಮೀಟರ್‌ಗೂ ಅಧಿಕ ಉದ್ದದ ಅಲ್ಯೂಮಿನಿಯಂ ಕೇಬಲ್ ಕಳುವಾಗಿತ್ತು. ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳ ಬಲೆಗೆ ಬಲೆ ಬೀಸಿದ್ದರು.

​₹15 ಲಕ್ಷ ಮೌಲ್ಯದ ಸೊತ್ತು ವಶ: ಬಂಧಿತ ಆರೋಪಿಗಳಿಂದ ಸುಮಾರು ₹10 ಲಕ್ಷ ಮೌಲ್ಯದ ಅಲ್ಯೂಮಿನಿಯಂ ಕೇಬಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು ₹15 ಲಕ್ಷ ಮೌಲ್ಯದ ಕಳವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

​ಅಧಿಕಾರಿಗಳ ಕಾರ್ಯಾಚರಣೆಗೆ ಪ್ರಶಂಸೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರ (SP) ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸ್ ತಂಡವು ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸಮಯಪ್ರಜ್ಞೆಯಿಂದ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಪ್ರಶಂಸಿದ್ದಾರೆ.


Share News