Share News

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ದೊಡ್ಡಬೆಟ್ಟದ ಬಳಿ ಅಪರೂಪದ ಹಾಗೂ ಸಂರಕ್ಷಿತ ವನ್ಯಜೀವಿಯಾದ ಚಿಪ್ಪುಹಂದಿಯ (Pangolin) ಚಿಪ್ಪುಗಳನ್ನು ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿ ಬಂಧಿಸಿದೆ.

​ಬಂಧಿತ ಆರೋಪಿಯನ್ನು ಮಹೇಶ ನಾಯಕ ಎಚ್. (27) ಎಂದು ಗುರುತಿಸಲಾಗಿದೆ.

​ಜುಲೈ 22 ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಹೆಗ್ಗೋಠಾರ ಗ್ರಾಮದ ಸಮೀಪವಿರುವ ದೊಡ್ಡಬೆಟ್ಟದ ಬಳಿ ಆರೋಪಿಯು ಅಕ್ರಮ ವನ್ಯಜೀವಿ ಸಾಮಗ್ರಿಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾಗ, ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ತಕ್ಷಣ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದೆ.

​ಚಿಪ್ಪುಹಂದಿಯ ಚಿಪ್ಪು: 2 ಕೆಜಿ 800 ಗ್ರಾಂ

​ಶಸ್ತ್ರಾಸ್ತ್ರಗಳು: 4 ನಾಡ ಬಂದೂಕುಗಳು ಹಾಗೂ ಬಂದೂಕಿಗೆ ಬಳಸುವ ಇತರೆ ವಸ್ತುಗಳು

​ವಾಹನ: 1 ಮೋಟಾರ್ ಬೈಕ್

​ಅರಣ್ಯ ಘಟಕದ ಸಿಐಡಿ ಪೊಲೀಸ್ ಮಹಾನಿರ್ದೇಶಕರಾದ ಸಂಗೀತ ಜಿ. ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

​ದಾಳಿಯಲ್ಲಿ ಚಾಮರಾಜನಗರ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಯಾಸ್ಮೀನ್ ತಾಜ್, ಸಿಬ್ಬಂದಿಗಳಾದ ಎಚ್.ಡಿ. ಸ್ವಾಮಿ, ನವೀನ್ ಕುಮಾರ್, ವೀರಭದ್ರಪ್ಪ, ಬಸವಯ್ಯ, ಪ್ರಸಾದ್, ಗೋವಿಂದನಾಯಕ ಮತ್ತು ರಾಜು ಸಕ್ರಿಯವಾಗಿ ಪಾಲ್ಗೊಂಡಿದ್ದರು.

​ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆ ಕೈಗೊಳ್ಳಲಾಗಿದೆ.

 


Share News