ಅಕ್ರಮ ಸಾರಾಯಿ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ, ಧಾಬಾ ಮಾಲೀಕ ಬಂಧನ!
ಧಾರವಾಡ: ಗೋವಾದಿಂದ ಧಾರವಾಡಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ಜಪ್ತಿ ಮಾಡಿ, ಧಾಬಾ ಮಾಲೀಕನೊಬ್ಬನನ್ನು ಬಂಧಿಸಿದ್ದಾರೆ.
ಧಾರವಾಡದ ಜೈಜೀನೇಂದರ ಕಾಲೊನಿ ನಿವಾಸಿ ಹಾಗೂ ಧಾಬಾ ವ್ಯಾಪಾರಿ ರೇವಣಸಾ ಪರಶುರಾಮ ಕಠಾರೆ ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ರೇಡ್:
ಆರೋಪಿಯು ಗೋವಾದಿಂದ ದುಬಾರಿ ಬ್ರ್ಯಾಂಡ್‌ಗಳ ಗೋವಾ ಸಾರಾಯಿ ಬಾಟಲಿಗಳನ್ನು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದನು. ಈ ಕುರಿತು ಸಿಕ್ಕ ಖಚಿತ ಮಾಹಿತಿ ಆಧರಿಸಿ ಬೆಳಗಿನ ಜಾವ ಸುಮಾರು ೨:೨೦ರ ವೇಳೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು, ಒಟ್ಟು ೧೫೨.೩೮೦ ಲೀಟರ್ ಗೋವಾ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಸಾಗಾಟಕ್ಕೆ ಬಳಸಿದ್ದ ಕಪ್ಪು ಬಣ್ಣದ ಹುಂಡೈ ಎಲಾಂಟ್ರಾ ಕಾರು ಹಾಗೂ ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
₹೧೭ ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ:
ದಾಳಿಯ ವೇಳೆ ಗೋವಾ ಮದ್ಯ, ಮೊಬೈಲ್ ಫೋನ್ ಹಾಗೂ ಎರಡು ವಾಹನಗಳು ಸೇರಿದಂತೆ ಒಟ್ಟು ₹೧೭,೦೦,೬೧೫ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.
ಧಾರವಾಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಹುಬ್ಬಳ್ಳಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿ ವಿಶ್ವನಾಥ ಎಸ್. ಮಾವಿನಕಟ್ಟಿ, ಉಪ ನಿರೀಕ್ಷಕರಾದ ನಾಗನಗೌಡ ಪಾಟೀಲ, ಮಚ್ಛೇಂದ್ರ ರೋಡಕರ, ಅಶೋಕ ಸಫಾರೆ ಹಾಗೂ ಶಿವಾನಂದ ಸುಣಗಾರ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.