ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಳಹಂತದ ಸಿಬ್ಬಂದಿಗಳ ಆರೋಗ್ಯ ಹಾಗೂ ಅನುಕೂಲತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಬ್ರಿಟಿಷ್ ಕಾಲದಿಂದಲೂ ಮುಂದುವರಿದುಕೊಂಡು ಬಂದಿದ್ದ ಹಳೆ ಮಾದರಿಯ ಮೆಟಲ್ ವಿಸಿಲ್ ಗಾರ್ಡ್ ಬದಲಾಗಿ ನೂತನ ಲ್ಯಾನ್ ಗಾರ್ಡ್ (Lanyard/Whistle Guard) ನೀಡುವುದಾಗಿ ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಈ ಕುರಿತು ನಿರಂತರವಾಗಿ ಗೃಹ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಪತ್ರ ಬರೆದು ಒತ್ತಾಯಿಸಿದ್ದರು. ಅವರ ಮನವಿಗೆ ಸ್ಪಂದಿಸಿ ಈ ಐತಿಹಾಸಿಕ ಬದಲಾವಣೆಗೆ ಸರ್ಕಾರ ಮುಂದಾಗಿದೆ.
ಬದಲಾವಣೆಗೆ ಪ್ರಮುಖ ಕಾರಣಗಳು ಹಾಗೂ ಹಿನ್ನೆಲೆ:
* ಆರೋಗ್ಯದ ಮೇಲೆ ದುಷ್ಪರಿಣಾಮ: ಸಮವಸ್ತ್ರದಲ್ಲಿ ಬಳಸುತ್ತಿದ್ದ ಮೆಟಲ್ ವಿಸಿಲ್ ಚೈನ್ ಹಾಗೂ ಮೆಟಲ್ ಗುಂಡಿಗಳು (Buttons) ಹವಮಾನ ವೈಪರಿತ್ಯದಿಂದಾಗಿ ಬೇಗನೆ ತುಕ್ಕು ಹಿಡಿಯುತ್ತಿದ್ದವು. ಇದರಿಂದ ಸಮವಸ್ತ್ರಗಳು ಹಾಳಾಗುವುದಲ್ಲದೆ, ತುಕ್ಕು ಕಲೆಗಳು ಸಿಬ್ಬಂದಿಗಳ ಚರ್ಮಕ್ಕೆ ತಾಕಿ ಚರ್ಮರೋಗ ಸೇರಿದಂತೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿತ್ತು.
* ಬೇಸಿಗೆಯ ತೊಂದರೆ: ಸಿಬ್ಬಂದಿಗಳು ಧರಿಸುತ್ತಿದ್ದ ಹಳೆ ಮಾದರಿಯ ಶೌಚ್ ಟೋಪಿಗಳು ವಿಶೇಷವಾಗಿ ಬೇಸಿಗೆಯಲ್ಲಿ ಅಸ್ವಸ್ಥತೆಯನ್ನು ಉಂಟುಮಾಡುತ್ತಿದ್ದವು. ಇದನ್ನು ಮನಗಂಡು ಇಲಾಖೆಯು ಈಗಾಗಲೇ ನೇವಿ ಬ್ಲೂ ಪೀಕ್ಸ್ ಕ್ಯಾಪ್‌ಗಳನ್ನು ಜಾರಿಗೊಳಿಸಿತ್ತು.
* ದೇಶದ ಇತರೆ ರಾಜ್ಯಗಳ ಮಾದರಿ: ಸಿಕ್ಕಿಂ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ದೆಹಲಿ ಸೇರಿದಂತೆ ದೇಶದ ಸುಮಾರು 17ಕ್ಕೂ ಹೆಚ್ಚು ರಾಜ್ಯಗಳ ಪೊಲೀಸ್ ಇಲಾಖೆಗಳು ಹಾಗೂ ನಮ್ಮ ರಾಜ್ಯದ ಅರಣ್ಯ ಮತ್ತು ಸಾರಿಗೆ ಇಲಾಖೆಗಳು ಈಗಾಗಲೇ ಮೆಟಲ್ ವಿಸಿಲ್ ಚೈನ್ ಬದಲಿಗೆ ಬಣ್ಣದ ವಿಸಿಲ್ ಗಾರ್ಡ್ ಹಾಗೂ ‘ಪಾಲಿಶ್ಡ್ ಮ್ಯಾಟ್ ಫಿನಿಶ್’ ಗುಂಡಿಗಳನ್ನು ಅಳವಡಿಸಿಕೊಂಡಿವೆ. ಅದೇ ಮಾದರಿಯನ್ನು ಈಗ ಕರ್ನಾಟಕದಲ್ಲೂ ಜಾರಿಗೆ ತರಲಾಗುತ್ತಿದೆ.
ರಾಜ್ಯ ಪೊಲೀಸ್ ಇಲಾಖೆಯ ಕೆಳಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ನೂತನ ಬದಲಾವಣೆಯನ್ನು ಪರಿಶೀಲಿಸಿ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮೋಹನ್ ಕುಮಾರ್ ದಾನಪ್ಪನವರು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Arakshakara Times Media
Related posts
