ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಡ್ರೋನ್ ಶೋ ಹಾಗೂ ಪಂಜಿನ ಕವಾಯತು ನಡೆಯಲಿರುವ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಹಾಗೂ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರು ಇಂದು ಭೇಟಿ ನೀಡಿ, ಭದ್ರತಾ ವ್ಯವಸ್ಥೆ ಹಾಗೂ ಬಂದೋಬಸ್ತ್ ಪರಿಶೀಲಿಸಿದರು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮೈದಾನದ ವಿವಿಧ ಭಾಗಗಳನ್ನು ವೀಕ್ಷಿಸಿದ ಡಿಜಿ-ಐಜಿಪಿ ಅವರು, ದಸರಾ ಕಾರ್ಯಕ್ರಮಗಳಿಗೆ ಆಗಮಿಸುವ ಲಕ್ಷಾಂತರ ಸಾರ್ವಜನಿಕರಿಗೆ ಮತ್ತು ಗಣ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದರು.
ಪರಿಶೀಲನೆ ವೇಳೆ ಜನಸಂದಣಿ ನಿಯಂತ್ರಣ, ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ವಹಣೆ, ಸುಗಮ ವಾಹನ ಸಂಚಾರ ವ್ಯವಸ್ಥೆ, ಭದ್ರತಾ ತಪಾಸಣೆ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಕುರಿತು ಹಿರಿಯ ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮಗಳು ಯಾವುದೇ ವಿಘ್ನವಿಲ್ಲದೆ ಶಾಂತಿಯುತವಾಗಿ ನೆರವೇರಲು ಎಲ್ಲಾ ವಿಭಾಗಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಭೇಟಿಯ ವೇಳೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Arakshakara Times Media
Related posts
