Share News

ಕಗ್ಗಲೀಪುರ: ಪತಿಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರಿಗೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

​ಕಗ್ಗಲೀಪುರ ನಿವಾಸಿ ನಾಗರತ್ನ (57) ಮೃತಪಟ್ಟ ದುರದೃಷ್ಟಕರ ಶಾಲಾ ಶಿಕ್ಷಕಿ.

​ಘಟನೆಯ ವಿವರ:

ಸೋಮವಾರ ಬೆಳಿಗ್ಗೆ ನಾಗರತ್ನ ಅವರು ತಮ್ಮ ಪತಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕನಕಪುರ ರಸ್ತೆಯಲ್ಲಿ ಅತಿಯಾದ ವೇಗದಲ್ಲಿ ಬಂದ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ಕೂಟರ್‌ನಿಂದ ಕೆಳಗೆ ಬಿದ್ದ ನಾಗರತ್ನ ಅವರ ಮೇಲೆಯೇ ಲಾರಿಯ ಚಕ್ರ ಹರಿದಿದೆ. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಅವರ ಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

​ಬೆಚ್ಚಿಬಿದ್ದ ಪ್ರತ್ಯಕ್ಷದರ್ಶಿಗಳು:

ಟಿಪ್ಪರ್ ಚಕ್ರ ಹರಿದ ಭೀಕರತೆಗೆ ಮಹಿಳೆಯ ದೇಹದ ಅಂಗಾಂಗಗಳು ಛಿದ್ರಗೊಂಡಿದ್ದು, ಹೃದಯವು ದೇಹದಿಂದ ಬೇರ್ಪಟ್ಟು ರಸ್ತೆಯ ಮೇಲೆ ಬಿದ್ದು ಕೆಲ ಕಾಲ ಮಿಡಿಯುತ್ತಿತ್ತು. ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಹಾದಿಹೋಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

​ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತಗಳು ಮತ್ತು ಕನಕಪುರ ರಸ್ತೆಯಲ್ಲಿ ಟಿಪ್ಪರ್ ಲಾರಿಗಳ ಅತಿಯಾದ ವೇಗದ ಚಾಲನೆಗೆ ಸ್ಥಳೀಯ ನಾಗರಿಕರು ತೀವ್ರ ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.

ವರದಿ :- ಗಿಲ್ಬರ್ಟ್. ಜೆ 


Share News