ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು ₹4.5 ಕೋಟಿ ಮೌಲ್ಯದ 4.5 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ತಮಿಳುನಾಡು ಮೂಲದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ.
ಥೈಲ್ಯಾಂಡ್‌ನಿಂದ ಚೆನ್ನೈಗೆ ವಿಮಾನದ ಮೂಲಕ ಭಾರಿ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಾಗುತ್ತಿದೆ ಎಂಬ ಗೌಪ್ಯ ಮಾಹಿತಿ ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ತೀವ್ರ ಕಣ್ಗಾವಲು ವಹಿಸಿದ್ದರು. ಬ್ಯಾಂಕಾಕ್‌ನಿಂದ ಬಂದಿಳಿದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಪರಿಶೀಲಿಸುವಾಗ, ಪ್ರವಾಸಿಗರಾಗಿ ತೆರಳಿ ಹಿಂತಿರುಗಿದ್ದ ತಮಿಳುನಾಡಿನ ಇಬ್ಬರು ಯುವಕರ ಮೇಲೆ ಅನುಮಾನ ವ್ಯಕ್ತವಾಗಿದೆ.
ಅಧಿಕಾರಿಗಳು ಇಬ್ಬರನ್ನೂ ತಡೆದು ವಿಚಾರಣೆ ನಡೆಸಿದಾಗ ಪರಸ್ಪರ ವಿರುದ್ಧ ಹೇಳಿಕೆ ನೀಡಿದ್ದಾರೆ. ತಕ್ಷಣವೇ ಅವರನ್ನು ಕಸ್ಟಮ್ಸ್ ಕಚೇರಿಗೆ ಕರೆದೊಯ್ದು ಅವರ ಸೂಟ್‌ಕೇಸ್‌ಗಳನ್ನು ತನಿಖೆಗೊಳಪಡಿಸಿದಾಗ, ಒಳಗಿದ್ದ ಸಂಸ್ಕರಿಸಿದ ಆಹಾರದ (Processed food) ಪ್ಯಾಕೆಟ್‌ಗಳಲ್ಲಿ ಉನ್ನತ ದರ್ಜೆಯ ‘ಹೈಡ್ರೋಪೋನಿಕ್ ಗಾಂಜಾ’ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
ಬಂಧಿತ ಇಬ್ಬರೂ ಯುವಕರು ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲಕ್ಕೆ (International Drug Trafficking Gang) ಕ್ಯಾರಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇವರನ್ನು ಥೈಲ್ಯಾಂಡ್‌ಗೆ ಕಳುಹಿಸಿದ ಸೂತ್ರಧಾರ ಯಾರು ಹಾಗೂ ಈ ಮಾದಕದ್ರವ್ಯವನ್ನು ಚೆನ್ನೈನಲ್ಲಿ ಯಾರಿಗೆ ತಲುಪಿಸಲು ತರಲಾಗುತ್ತಿತ್ತು ಎಂಬ ಕುರಿತು ಕಸ್ಟಮ್ಸ್ ಅಧಿಕಾರಿಗಳು ತೀವ್ರ ತನಿಖೆ ಮುಂದುವರಿಸಿದ್ದಾರೆ.