Share News

ಮಂಗಳೂರು: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಕಾರಿ ಕಾಮೆಂಟ್ ಪೋಸ್ಟ್ ಮಾಡಿದ ಆರೋಪಿಯನ್ನು ಮಂಗಳೂರಿನ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

​ಬಂಧಿತನನ್ನು ಚಾಮರಾಜನಗರ ಮೂಲದ ರಾಜೇಂದ್ರ ಸಿ. (48) ಎಂದು ಗುರುತಿಸಲಾಗಿದೆ. ಈತ ‘ಬಾಲು ರಾಜೇಂದ್ರ’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯ ಮೂಲಕ ಅವಹೇಳನಕಾರಿ ಸಂದೇಶಗಳನ್ನು ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಜನವರಿ ತಿಂಗಳಿನಲ್ಲಿ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕಿರಾತ್’ (ಕುರಾನ್ ಪಠಣ) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವಿಡಿಯೋ ‘ಉದಯವಾಣಿ’ ಫೇಸ್‌ಬುಕ್ ಪುಟದಲ್ಲಿ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ, ಆರೋಪಿಯು ಕೋಮು ಪ್ರಚೋದನಕಾರಿಯಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ. 15/2026) ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಆರೋಪಿಯನ್ನು ಚಾಮರಾಜನಗರದಲ್ಲಿ ಪತ್ತೆಹಚ್ಚಿದ್ದಾರೆ. ಮಾರ್ಚ್ 28ರಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196 ಹಾಗೂ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 66ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ.

​”ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು,” ಎಂದು ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

​ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವಂತಹ ಪೋಸ್ಟ್ ಅಥವಾ ಕಾಮೆಂಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.


Share News