ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್‌ಪೇಟೆ ಮುಖ್ಯರಸ್ತೆಯಲ್ಲಿ ಚಿನ್ನದ ರಿಫೈನರಿ ಅಂಗಡಿ ನಡೆಸುತ್ತಿದ್ದ ಮಾಲೀಕರು, ತಮ್ಮ ಅಂಗಡಿಯಲ್ಲಿ ಕಳವಾಗಿರುವ ಬಗ್ಗೆ ದೂರು ನೀಡಿದ್ದರು. ಅಂದು ರಾತ್ರಿ ಅಪರಿಚಿತ ವ್ಯಕ್ತಿಗಳು ಕಟ್ಟಡದ 5ನೇ ಮಹಡಿಯ ಶೌಚಾಲಯದ ಕಿಟಕಿಯ ಮೂಲಕ ಒಳನುಗ್ಗಿ, ರಿಫೈನಿಂಗ್‌ಗಾಗಿ ಇಟ್ಟಿದ್ದ 24 ಕ್ಯಾರೆಟ್‌ನ ಚಿನ್ನದ ಗಟ್ಟಿಗಳನ್ನು ಕದ್ದೊಯ್ದಿದ್ದರು. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು ಶ್ರೀರಾಮಪುರದ ಸನ್‌ರೈಜ್ ಸರ್ಕಲ್ ಬಳಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ವಿಚಾರಣೆಯ ವೇಳೆ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತರ ಮಾಹಿತಿಯ ಮೇರೆಗೆ ಪೊಲೀಸರು ಓರ್ವ ಆರೋಪಿಯ ಸ್ನೇಹಿತನಿಂದ 15 ಗ್ರಾಂ ಹಾಗೂ ಓಕಳಿಪುರಂನಲ್ಲಿರುವ ಮತ್ತೊಬ್ಬ ಆರೋಪಿಯ ಮನೆಯಿಂದ 69 ಗ್ರಾಂ ಸೇರಿದಂತೆ ಒಟ್ಟು 12 ಲಕ್ಷ ರೂಪಾಯಿ ಮೌಲ್ಯದ 84 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ಶ್ರೀ. ಅಕ್ಷಯ ಎಂ ಹಾಕೇ ಹಾಗೂ ಹಲಸೂರು ಗೇಟ್ ಎಸಿಪಿ ಶ್ರೀ. ಸುಧೀರ್ ಎಸ್ ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್‌ಗಳಾದ ಶ್ರೀ. ಅಶ್ವತ್ಥನಾರಾಯಣಸ್ವಾಮಿ ಬಿಎನ್ ಮತ್ತು ಶ್ರೀ. ಶಿವಪ್ಪ ಅವರುಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್