Share News

ಬೆಂಗಳೂರು: ತಾನು ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಬರೋಬ್ಬರಿ 145 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹17 ಲಕ್ಷ ಮೌಲ್ಯದ 110 ಗ್ರಾಂ ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಲಾಗಿದೆ.

​ಪ್ರಕರಣದ ಹಿನ್ನೆಲೆ:

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ವಾಸವಿರುವ ದೂರುದಾರರು ಆಗಸ್ಟ್ 18, 2026ರಂದು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಸ್ಟ್ 6 ರಿಂದ ಆಗಸ್ಟ್ 8ರ ನಡುವಿನ ಅವಧಿಯಲ್ಲಿ ತಮ್ಮ ಮನೆಯಲ್ಲಿದ್ದ 145 ಗ್ರಾಂ ಚಿನ್ನಾಭರಣ ಕಳುವಾಗಿದ್ದು, ಮನೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನವಿರುವುದಾಗಿ ತಿಳಿಸಿದ್ದರು. ಈ ಕುರಿತು ಪೊಲೀಸರು ಕಳವು ಪ್ರಕರಣ ದಾಖಲಿಸಿಕೊಂಡಿದ್ದರು.

​ವಿಚಾರಣೆ ಹಾಗೂ ಜಪ್ತಿ ವಿವರ:

ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ಆಗಸ್ಟ್ 27, 2026ರಂದು ಆರೋಪಿಯನ್ನು ಯಲಹಂಕ 4ನೇ ಹಂತದ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

​ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದಾಗ, ಕದ್ದ ಚಿನ್ನಾಭರಣಗಳನ್ನು ಕಲಬುರಗಿಯ ಎರಡು ಜ್ಯೂವೆಲ್ಲರಿ ಅಂಗಡಿಗಳಿಗೆ ಮಾರಾಟ ಮಾಡಿರುವುದಾಗಿ ಹಾಗೂ ಉಳಿದಿದ್ದನ್ನು ಅಲ್ಲಿನ ಸ್ನೇಹಿತನಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

​ಆರೋಪಿ ನೀಡಿದ ಮಾಹಿತಿ ಮೇರೆಗೆ ಆಗಸ್ಟ್ 29 ರಿಂದ ಆಗಸ್ಟ್ 31ರ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು:

​ಕಲಬುರಗಿಯ ಜ್ಯೂವೆಲ್ಲರಿ ಅಂಗಡಿಗಳಿಂದ 90 ಗ್ರಾಂ ಚಿನ್ನ

​ಆರೋಪಿಯ ಸ್ನೇಹಿತನಿಂದ 20 ಗ್ರಾಂ ಚಿನ್ನದ ಗಟ್ಟಿ

​ಸೇರಿದಂತೆ ಒಟ್ಟು ₹17,00,000 ಮೌಲ್ಯದ 110 ಗ್ರಾಂ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.

​ನ್ಯಾಯಾಂಗ ಬಂಧನ:

ಸೆಪ್ಟೆಂಬರ್ 02, 2026ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

​ಪೊಲೀಸ್ ತಂಡದ ಭರ್ಜರಿ ಕಾರ್ಯಾಚರಣೆ:

ನೈಋತ್ಯ ವಿಭಾಗದ ಡಿಸಿಪಿ ಶ್ರೀಮತಿ ಅನಿತಾ ಬಿ. ಹದ್ದಣ್ಣವರ್ (IPS) ಅವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪವಿಭಾಗದ ಎಸಿಪಿ ಶ್ರೀ ಗೋಪಾಲ ಡಿ. ಜೋಗೀನ ನೇತೃತ್ವದಲ್ಲಿ, ತಲಘಟ್ಟಪುರ ಇನ್‌ಸ್ಪೆಕ್ಟರ್ ಶ್ರೀ ಆರ್.ಎಸ್. ಚೌಧರಿ ಹಾಗೂ ಸಿಬ್ಬಂದಿಗಳ ತಂಡ ಈ ಕಳವು ಪ್ರಕರಣವನ್ನು ಭೇದಿಸಿದೆ.


Share News