ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಕೆರೆ ಕಾಲುವೆಗೆ ಅಕ್ರಮವಾಗಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು (Medical Waste) ಸುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಅಧಿಕಾರಿಗಳು ಖಾಸಗಿ ಕ್ಲಿನಿಕ್ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ (FIR) ದಾಖಲಿಸಿದ್ದಾರೆ.
ಖಾಸಗಿ ಕ್ಲಿನಿಕ್ನ ವೈದ್ಯರಾದ ಡಾ. ಅರುಣ್ ಗಿರೀಶ್ ಸಾಗರ್ ಎಂಬುವವರ ವಿರುದ್ಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾದ ಪ್ರಮುಖ ಆರೋಪಿಯಾಗಿದ್ದಾರೆ.
ಸಚಿವ ಈಶ್ವರ ಖಂಡ್ರೆ ಅವರು ಯಂಟಗಾನಹಳ್ಳಿ ಗ್ರಾಮ ಪಂಚಾಯ್ತಿಗೆ ಹಠಾತ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಸಾರ್ವಜನಿಕರು ಕೆರೆಗೆ ವೈದ್ಯಕೀಯ ತ್ಯಾಜ್ಯವನ್ನು ಸುರಿದು ಪರಿಸರ ಮಾಲಿನ್ಯ ಮಾಡುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ದೂರಿನ ಗಂಭೀರತೆಯನ್ನು ಅರಿತ ಸಚಿವರು, ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಸಚಿವರ ಸೂಚನೆಯ ಬೆನ್ನಲ್ಲೇ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ (EO) ಡಾ. ಬಿಂದು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಚಿತ್ರ ಮಾಹಿತಿಯನ್ನು ಸಿದ್ಧಪಡಿಸಿದ್ದರು. ಬಳಿಕ ತಾಲೂಕು ವೈದ್ಯಾಧಿಕಾರಿ (THO) ಡಾ. ಪದ್ಮಿನಿ ಅವರು ನೆಲಮಂಗಲ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಸಿಮೆಂಟ್ ಚೀಲಗಳಲ್ಲಿ ತುಂಬಿದ್ದ ಬಳಸಿದ ನೂರಾರು ಸಿರೆಂಜ್ಗಳು, ಸೂಜಿಗಳು, ರಕ್ತಸಿಕ್ತವಾಗಿದ್ದ ಹತ್ತಿ ಹಾಗೂ ಬ್ಯಾಂಡೇಜ್ಗಳನ್ನು ಕೆರೆಗೆ ನೀರು ಹರಿದು ಹೋಗುವ ಪ್ರಮುಖ ಕಾಲುವೆಯಲ್ಲೇ ಎಸೆದಿರುವುದು ಪತ್ತೆಯಾಗಿದೆ.
ಯಂಟಗಾನಹಳ್ಳಿ ಕೆರೆಯ ನೀರನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಜಾನುವಾರುಗಳು ಕುಡಿಯಲು ಮತ್ತು ಇತರೆ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಇಂತಹ ಜನನಿಬಿಡ ನೀರಿನ ಮೂಲಕ್ಕೆ ಅಪಾಯಕಾರಿ ಬಯೋ-ಮೆಡಿಕಲ್ ತ್ಯಾಜ್ಯ ಸುರಿದಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿತ್ತು. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ವೈದ್ಯ ಡಾ. ಅರುಣ್ ಗಿರೀಶ್ ಸಾಗರ್ ಇದು ತಮ್ಮದೇ ಆಸ್ಪತ್ರೆಯ ತ್ಯಾಜ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಫ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದೆ. ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.