ಗೋಕಾಕ: ಅಂತರರಾಜ್ಯ ಮಟ್ಟದಲ್ಲಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಗೋಕಾಕ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು ₹3.84 ಲಕ್ಷ ಮೌಲ್ಯದ 7 ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.
ಮೂಲತಃ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ ನಿವಾಸಿಯಾಗಿದ್ದು, ಸದ್ಯ ರಾಮದುರ್ಗ ತಾಲೂಕಿನ ಕಡಕೋಳ ಗ್ರಾಮದಲ್ಲಿ ವಾಸವಿದ್ದ ರಮೇಶ ಮನೋಹರ ಸುತಾರ (36) ಬಂಧಿತ ಆರೋಪಿ.
ಕಳೆದ ಮಾರ್ಚ್ 30 ರಂದು ಗೋಕಾಕ ನಗರದ ಬಸ್ ನಿಲ್ದಾಣದಲ್ಲಿ ಬೈಕ್ ಕಳುವಾದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ತನಿಖೆ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸರಣಿ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಯು ಗೋಕಾಕ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಬೈಕ್ ಸೇರಿದಂತೆ, ಬೆಳಗಾವಿ ಸಾಂಬ್ರಾ, ಸಂಕೇಶ್ವರ ಹಾಗೂ ಗಡಹಿಂಗ್ಲಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಟ್ಟು 7 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಂಜನ ಕೆ, ಹೆಚ್ಚುವರಿ ಎಸ್.ಪಿ. ರಾಮಗೊಂಡ ಬಸರಗಿ, ಡಿವೈಎಸ್ಪಿ ರವಿ ನಾಯಿಕ ಹಾಗೂ ಗೋಕಾಕ ವೃತ್ತ ಇನ್ಸ್ಪೆಕ್ಟರ್ ಸುರೇಶಬಾಬು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ತಂಡದಲ್ಲಿ ಪಿಎಸ್ಐ ಕಿರಣ ಮೋಹಿತೆ, ಪ್ರೊ. ಪಿಎಸ್ಐ ಗೌರಿಶಂಕರ ಹಾಗೂ ಸಿಬ್ಬಂದಿಗಳಾದ ಆರ್.ಬಿ. ಹಡಪದ, ಕೆ.ಎನ್. ಇಳಿಗೇರ, ಬಿ.ಎಸ್. ಸಿದ್ನಾಳ, ಎಂ.ಆರ್. ಅಂಬಿ ಸೇರಿದಂತೆ ಬೆಳಗಾವಿ ಟೆಕ್ನಿಕಲ್ ಸೆಲ್ನ ಸಚೀನ ಪಾಟೀಲ್ ಭಾಗವಹಿಸಿದ್ದರು. ಕಾರ್ಯಾಚರಣೆ ನಡೆಸಿದ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ಆರೋಪಿಯನ್ನು ಸದ್ಯ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.