Share News

ಬೆಂಗಳೂರು: ನೈರುತ್ಯ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ತನಿಖಾ ಕೌಶಲ್ಯ ಹಾಗೂ ತನಿಖಾ ವಿಧಾನಗಳನ್ನು ಮೇಲ್ಮಟ್ಟಕ್ಕೇರಿಸುವ ಉದ್ದೇಶದಿಂದ ಸೆಪ್ಟೆಂಬರ್ 24ರಂದು ಜ್ಞಾನಭಾರತಿ ಕ್ಯಾಂಪಸ್‌ನ ಪ್ರೊ. ವೆಂಕಟಗಿರಿಗೌಡ ಮೆಮೋರಿಯಲ್ ಹಾಲ್‌ನಲ್ಲಿ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

​ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲರಾದ ಶ್ರೀ ರಂಗನಾಥ ಎಂ.ಎ. ಅವರು ತನಿಖೆಯ ವೇಳೆ ಅನುಸರಿಸಬೇಕಾದ ಕಾನೂನು ಮಾರ್ಗಸೂಚಿಗಳು, ಗುಣಮಟ್ಟದ ತನಿಖೆಗೆ ಅಗತ್ಯವಾದ ಕ್ರಮಗಳು, ವರದಕ್ಷಿಣೆ ನಿಷೇಧ ಕಾಯ್ದೆ, ಭಾರತೀಯ ಸಾಕ್ಷ್ಯ ಅಧಿನಿಯಮ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳ ಸಂಗ್ರಹಣೆಗೆ ಸಂಬಂಧಿಸಿದ ಇತ್ತೀಚಿನ ನ್ಯಾಯಾಲಯದ ಪ್ರಮುಖ ಆದೇಶಗಳ ಕುರಿತು ಸವಿಸ್ತಾರವಾದ ತರಬೇತಿ ನೀಡಿದರು.

​ಪ್ರಕರಣಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ವಿಧಾನಗಳು ಹಾಗೂ ತನಿಖೆಯ ವಿವಿಧ ಹಂತಗಳಲ್ಲಿ ವಹಿಸಬೇಕಾದ ಜಾಗ್ರತೆಗಳ ಕುರಿತು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.

​ಈ ಕಾರ್ಯಾಗಾರವು ನೈರುತ್ಯ ವಿಭಾಗದ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾನೂನು ಜ್ಞಾನ, ತನಿಖಾ ಸಾಮರ್ಥ್ಯ ಹಾಗೂ ವೃತ್ತಿಪರತೆಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ಮುಂದಿನ ದಿನಗಳಲ್ಲಿ ಪ್ರಕರಣಗಳ ಶೀಘ್ರ ಮತ್ತು ಪರಿಣಾಮಕಾರಿ ತನಿಖೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.


Share News