Share News

ನಗರದ ವಿವಿಧೆಡೆ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜು ಒಡೆದು ಹಾಗೂ ಹೈವೇಗಳಲ್ಲಿ ವಿಶ್ರಮಿಸುತ್ತಿದ್ದ ಚಾಲಕರ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಹೆಚ್.ಎ.ಎಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 16 ಲಕ್ಷ ಮೌಲ್ಯದ 64 ಮೊಬೈಲ್ ಫೋನ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಹೆಚ್.ಎ.ಎಲ್ ಪೌಂಡ್ರಿ ಮತ್ತು ಫೋರ್ಜಿ ಡಿವಿಜನ್‌ನ ಪಾರ್ಕಿಂಗ್ ಸ್ಥಳದಲ್ಲಿ ಆಟೋ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರ ಆಟೋದ ಡ್ಯಾಶ್ ಬೋರ್ಡ್ ಮುರಿದು ಮೊಬೈಲ್‌ಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ದಾಖಲಾದ ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯು ಬೆಂಗಳೂರಿನ ವಿವಿಧೆಡೆ ಮೊಬೈಲ್ ಸ್ನ್ಯಾಚಿಂಗ್ ಮಾಡುತ್ತಿದ್ದನು.

ವಿಶೇಷವಾಗಿ ಹೈವೇ ರಸ್ತೆಗಳಲ್ಲಿ ಲಾರಿ, ಆಟೋ ಹಾಗೂ ಕ್ಯಾಬ್‌ಗಳಲ್ಲಿ ಮಲಗಿದ್ದ ಚಾಲಕರ ಮೊಬೈಲ್‌ಗಳನ್ನು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳ ಡ್ಯಾಶ್ ಬೋರ್ಡ್ ಮುರಿದು ಫೋನ್‌ಗಳನ್ನು ಕದಿಯುತ್ತಿದ್ದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ಮೊದಲು ಆತನಿಂದ 14 ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು, ನಂತರ ಆತ ನೀಡಿದ ಮಾಹಿತಿಯ ಮೇರೆಗೆ ಮುರುಗೇಶ ಪಾಳ್ಯದ ರೂಮ್ ಒಂದರಲ್ಲಿ ಬಚ್ಚಿಟ್ಟಿದ್ದ ಮತ್ತೂ 50 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಶ್ರೀ. ಸೈದುಲು ಅಡಾವತ್ ಅವರ ಮಾರ್ಗದರ್ಶನದಲ್ಲಿ ಮತ್ತು ಮಾರತ್ತಹಳ್ಳಿ ಉಪವಿಭಾಗದ ಎಸಿಪಿ ಶ್ರೀ. ಸುಧಾಕರ್ ಎ.ಬಿ ಅವರ ನೇತೃತ್ವದಲ್ಲಿ ಹೆಚ್.ಎ.ಎಲ್ ಇನ್ಸ್‌ಪೆಕ್ಟರ್ ಶ್ರೀ. ಅಜರುದ್ದೀನ್ ಹಾಗೂ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಬಂಧಿತ ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವರದಿ: – ಮೋಹನ್ ಕುಮಾರ್ ಎಸ್ ನಾಯ್ಕ್


Share News