Share News

ವಿಶಾಖಪಟ್ಟಣ: ಪರೀಕ್ಷೆಯಲ್ಲಿ ಪಾಸ್ ಆಗಲು ವಿದ್ಯಾರ್ಥಿಗಳು ಓದುತ್ತಾರೆ, ಇಲ್ಲವೇ ಪರೀಕ್ಷೆ ಮುಗಿದ ಮೇಲೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದರೆ ಆಂಧ್ರಪ್ರದೇಶದ ಈ ವಿದ್ಯಾರ್ಥಿ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ, ನೇರವಾಗಿ ಪರೀಕ್ಷಾ ಮಂಡಳಿ (Board) ಅಧಿಕಾರಿಗಳಿಗೇ ಫೋನ್ ಮಾಡಿ ಲಂಚದ ಆಮಿಷವೊಡ್ಡಿ ಪಾಸು ಮಾಡುವಂತೆ ಬೇಡಿಕೊಂಡಿದ್ದಾನೆ!

ಇಂಟರ್ ಮೀಡಿಯಟ್ ಪರೀಕ್ಷೆ ಬರೆದಿದ್ದ ಈ ವಿದ್ಯಾರ್ಥಿ, ಉತ್ತರ ಪತ್ರಿಕೆಯಲ್ಲಿ ಬರೆಯಲು ಏನೂ ತಿಳಿಯದೆ ಕೊಟ್ಟಿದ್ದ ಪ್ರಶ್ನೆ ಪತ್ರಿಕೆಯನ್ನೇ ಮೂರು ಬಾರಿ ಕಾಪಿ ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಈತ, ಮೌಲ್ಯಮಾಪನ ಮಾಡುವವರು ತನ್ನನ್ನು ಪಾಸ್ ಮಾಡಲಿ ಎಂಬ ಆಸೆಯಿಂದ ಉತ್ತರ ಪತ್ರಿಕೆಯೊಳಗೆ ಹಣವನ್ನೂ ಇಟ್ಟು ಬಂದಿದ್ದನು.

ಬುಧವಾರ ಮಂಡಳಿಯ ಅಧಿಕಾರಿಗಳಿಗೆ ಫೋನ್ ಮಾಡಿದ ವಿದ್ಯಾರ್ಥಿ, “ಸರ್, ನಾನು ಪರೀಕ್ಷೆ ಸರಿಯಾಗಿ ಬರೆದಿಲ್ಲ. ಉತ್ತರ ಪತ್ರಿಕೆಯೊಳಗೆ ಹಣ ಇಟ್ಟಿದ್ದೇನೆ, ದಯವಿಟ್ಟು ಅದನ್ನು ನೋಡಿಯಾದರೂ ನನ್ನನ್ನು ಪಾಸ್ ಮಾಡಿ” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು ಗೋಗರೆದಿದ್ದಾನೆ. ವಿದ್ಯಾರ್ಥಿಯ ಈ ವಿಚಿತ್ರ ಧೈರ್ಯ ಮತ್ತು ಮಾತು ಕೇಳಿ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ವಿದ್ಯಾರ್ಥಿಯ ಆತಂಕವನ್ನು ಅರ್ಥಮಾಡಿಕೊಂಡ ಅಧಿಕಾರಿಗಳು ಆತನನ್ನು ತರಾಟೆಗೆ ತೆಗೆದುಕೊಳ್ಳುವ ಬದಲು, ತಾಳ್ಮೆಯಿಂದ ಕೌನ್ಸೆಲಿಂಗ್ ಮಾಡಿದ್ದಾರೆ. “ಹಣ ನೀಡುವುದು ಅಥವಾ ಇಂತಹ ಅಡ್ಡದಾರಿ ಹಿಡಿಯುವುದು ಕಾನೂನುಬಾಹಿರ ಮತ್ತು ತಪ್ಪು. ಮುಂದಿನ ಬಾರಿ ಚೆನ್ನಾಗಿ ಓದಿ ಸಪ್ಲಿಮೆಂಟರಿ ಪರೀಕ್ಷೆ ಬರೆಯುವಂತೆ” ಆತನಿಗೆ ಬುದ್ಧಿವಾದ ಹೇಳಿ ಧೈರ್ಯ ತುಂಬಿದ್ದಾರೆ.

ಗುರುವಾರ ಪ್ರಕಟವಾದ ಆಂಧ್ರಪ್ರದೇಶದ ಇಂಟರ್ ಫಲಿತಾಂಶದಲ್ಲಿ ಈ ವಿದ್ಯಾರ್ಥಿ ನಿರೀಕ್ಷೆಯಂತೆಯೇ ಅನುತ್ತೀರ್ಣನಾಗಿದ್ದಾನೆ. ಪ್ರಥಮ ವರ್ಷದ ಎರಡು ಮತ್ತು ದ್ವಿತೀಯ ವರ್ಷದ ಮೂರು ವಿಷಯಗಳಲ್ಲಿ ಈತ ಫೇಲ್ ಆಗಿದ್ದಾನೆ.

​ಸದ್ಯ ಈ ವಿದ್ಯಾರ್ಥಿಯ ಫೋನ್ ಕಾಲ್ ಸಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು “ವಿದ್ಯಾರ್ಥಿಯ ಮುಗ್ಧತೆ ಹಾಗೂ ಆತನ ನಕಲಿ ದಾರಿಯ ಬಗ್ಗೆ” ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Share News