Share News

ಬೆಂಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಅಧಿಕೃತವಾಗಿ ನಾಶಪಡಿಸಿದ್ದಾರೆ. ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಹಿನ್ನೆಲೆಯಲ್ಲಿ ಹಾಗೂ ನ್ಯಾಯಾಲಯದ ಮಾರ್ಗಸೂಚಿಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

​ವಿವಿಧ ಎನ್‌ಡಿಪಿಎಸ್ (NDPS) ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಗಾಂಜಾ, ಎಂ.ಡಿ.ಎಂ.ಎ. (MDMA) ಹಾಗೂ ಕೊಕೇನ್ (Cocaine) ಸೇರಿದಂತೆ ಒಟ್ಟು ₹2,43,35,000 (ಎರಡು ಕೋಟಿ ನಲವತ್ತಮೂರು ಲಕ್ಷದ ಮೂವತ್ತೈದು ಸಾವಿರ ರೂ.) ಮೌಲ್ಯದ ಡ್ರಗ್ಸ್ ಅನ್ನು ದಿನಾಂಕ 24-06-2026 ರಂದು ನಾಶಪಡಿಸಲಾಗಿದೆ.

ದಾಖಲಾಗಿರುವ ಪ್ರಕರಣಗಳ ಕಾನೂನು ಪ್ರಕ್ರಿಯೆಗಳು ಮುಗಿದ ನಂತರ, ಸರ್ಕಾರದ ಉನ್ನತ ಮಟ್ಟದ ಡ್ರಗ್ಸ್ ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಈ ಕಾರ್ಯಾಚರಣೆ ನಡೆದಿದೆ. ನೆರೆಹೊರೆಯ ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ, ದಾಬಸ್‌ಪೇಟೆಯಲ್ಲಿರುವ ಮೆಸಸ್ ರಾಮ್ಕಿ ಎನ್ವಿರೋ ಇಂಜಿನಿಯರ್ಸ್ ಲಿಮಿಟೆಡ್ (M/s Ramky Enviro Engineers Ltd) ಕಂಪನಿಯ ಘಟಕದಲ್ಲಿ ವೈಜ್ಞಾನಿಕ ಹಾಗೂ ನಿಯಮಾನುಸಾರವಾಗಿ ಈ ಎಲ್ಲಾ ಮಾದಕ ವಸ್ತುಗಳನ್ನು ಸುಟ್ಟು ಭಸ್ಮ ಮಾಡಲಾಯಿತು.

​ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಬೆಂಗಳೂರು ಜಿಲ್ಲಾ ಪೊಲೀಸ್ ಇಲಾಖೆ ಕಟಿಬದ್ಧವಾಗಿದ್ದು, ಡ್ರಗ್ಸ್ ಜಾಲದ ವಿರುದ್ಧದ ಕಾರ್ಯಾಚರಣೆ ಮುಂದೆಯೂ ಕಠಿಣವಾಗಿ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 


Share News