ಮದ್ದೂರು: “ನಾನು ಜೀವನದಲ್ಲಿ ಯಾರ ಮುಂದೆಯೂ ಎಂದೂ ಕೈಚಾಚಿದವನಲ್ಲ. ಅಂತಹ ಹಠ ನನ್ನದು. ಆದರೆ, ನಾನು ಕೇಳುವ ಮುಂಚೆಯೇ ನನ್ನ ಕಷ್ಟಕ್ಕೆ ಧಾವಿಸಿ, ‘ನಾನು ನಿನಗೆ ಏನು ಮಾಡಬೇಕು ಹೇಳು’ ಎಂದು ಬೆನ್ನೆಲುಬಾಗಿ ನಿಂತ ಏಕೈಕ ವ್ಯಕ್ತಿ ಡಿ.ಕೆ. ಶಿವಕುಮಾರ್,” ಎಂದು ಖ್ಯಾತ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾವುಕರಾಗಿ ನುಡಿದರು.
ಬುಧವಾರ ನಡೆದ ‘ಮದ್ದೂರು ಉತ್ಸವ-2026’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ ಐದು ದಶಕಗಳ ಸುದೀರ್ಘ ಸ್ನೇಹದ ಪುಟಗಳನ್ನು ಬಿಚ್ಚಿಟ್ಟರು.
ತಮ್ಮ ಮತ್ತು ಡಿ.ಕೆ. ಶಿವಕುಮಾರ್ ಅವರ ಸ್ನೇಹ ಶಾಲಾ ದಿನಗಳಿಂದಲೂ ಬೆಳೆದು ಬಂದಿದ್ದನ್ನು ಸ್ಮರಿಸಿದ ರವಿಚಂದ್ರನ್, “ನಾವು ಶಾಲಾ ದಿನಗಳಿಂದಲೂ ಸ್ನೇಹಿತರು. ಸುಮಾರು 40-50 ವರ್ಷಗಳ ಗೆಳೆತನ ನಮ್ಮದು. ಅವರು ರಾಜಕೀಯದಲ್ಲಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ, ನಾನು ಎಂದೂ ಈ ಸ್ನೇಹವನ್ನು ನನ್ನ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡವನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನನ್ನ ಕಷ್ಟದ ಸಮಯದಲ್ಲಿ ಅವರು ನೀಡಿದ ಬೆಂಬಲ ಅಪಾರ. ಅವರ ಉಪಕಾರವನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ,” ಎಂದು ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಮದ್ದೂರು ಶಾಸಕ ಉದಯ್ ಅವರ ಬಗ್ಗೆಯೂ ಮಾತನಾಡಿದ ರವಿಚಂದ್ರನ್, “ಉದಯ್ ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ. ವಿಶೇಷವೆಂದರೆ, ಅವರು ನನಗೆ ಸಹಾಯ ಮಾಡಿದ ವಿಷಯ ನನಗೇ ಎರಡು ವರ್ಷಗಳ ನಂತರ ತಿಳಿಯಿತು. ಪ್ರಚಾರ ಬಯಸದೆ ಸ್ನೇಹಿತರ ಮೂಲಕ ಬೆಂಬಲವಾಗಿ ನಿಂತ ಇಂತಹ ಪ್ರೀತಿ ನನಗಚ್ಚರಿ ಮೂಡಿಸಿದೆ. ಅವರಿಬ್ಬರ ಮೇಲಿನ ಅಭಿಮಾನಕ್ಕಾಗಿಯೇ ನಾನು ಇಂದು ಇಲ್ಲಿಗೆ ಬಂದಿದ್ದೇನೆ,” ಎಂದರು.
ರಾಜಕೀಯ ಕಾರ್ಯಕ್ರಮಗಳಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳುವ ರವಿಚಂದ್ರನ್ ಅವರು, ಮದ್ದೂರು ಉತ್ಸವದ ವೇದಿಕೆಯಲ್ಲಿ ತಮ್ಮ ಗೆಳೆತನದ ಬಗ್ಗೆ ತೋರಿದ ಈ ಆತ್ಮೀಯತೆ ಮತ್ತು ಕೃತಜ್ಞತಾ ಭಾವವು ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಗಮನ ಸೆಳೆಯಿತು.