Share News

ಆನೇಕಲ್: ಸಿನಿಮಾಗಳಲ್ಲಿ ಬರುವ ಆಕ್ಷನ್ ದೃಶ್ಯಗಳ ಮಾದರಿಯಲ್ಲಿ ರಾತ್ರಿ ವೇಳೆ ಚಲಿಸುತ್ತಿದ್ದ ಲಾರಿಯೊಂದನ್ನು ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್‌ ಒಂದನ್ನು ಸೂರ್ಯನಗರ ಪೊಲೀಸರು ಕೇವಲ ೨೪ ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಉಪವಿಭಾಗದ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೋಚಕ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಸರ್ಜಾಪುರದ ಸೋಂಪುರ ನಿವಾಸಿ ಶರತ್ ಕುಮಾರ್ (೨೩), ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದ ರೂಪೇಶ್ (೨೬) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಆರೋಪಿಗಳು ಕಂಠಪೂರ್ತಿ ಮದ್ಯ ಸೇವಿಸಿ ಸುಲಭವಾಗಿ ಮತ್ತು ಅತಿ ವೇಗವಾಗಿ ಹಣ ಸಂಪಾದಿಸುವ ಉದ್ದೇಶದಿಂದ ದರೋಡೆಗೆ ಸಂಚು ರೂಪಿಸಿದ್ದರು. ಚಂದಾಪುರ-ಆನೇಕಲ್ ಮುಖ್ಯರಸ್ತೆಯ ಮರಸೂರು ಗೇಟ್ ಸಮೀಪ ರಾತ್ರಿ ವೇಳೆ ಸಾಗುತ್ತಿದ್ದ ಲಾರಿಯೊಂದನ್ನು ಈ ಗ್ಯಾಂಗ್ ಸಿನಿಮಾ ಸ್ಟೈಲ್‌ನಲ್ಲಿ ಅಡ್ಡಗಟ್ಟಿದೆ. ಚಾಲಕನನ್ನು ಕೆಳಕ್ಕಿಳಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೀವಭಯದಿಂದ ಚಾಲಕ ಅಲ್ಲಿಂದ ಓಡಿ ಹೋಗುತ್ತಿದ್ದಂತೆ, ಆರೋಪಿಗಳು ಲಾರಿಯನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳು ಕೇವಲ ಲಾರಿ ಕದಿಯುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಅದರ ಹಿಂದೆ ದೊಡ್ಡದೊಂದು ಬ್ಲ್ಯಾಕ್‌ಮೇಲ್ ತಂತ್ರ ಅಡಗಿತ್ತು. ಸದ್ಯದ ಆಧುನಿಕ ಲಾರಿಗಳಲ್ಲಿ ಜಿಪಿಆರ್‌ಎಸ್ (GPRS) ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಿರುತ್ತಾರೆ ಎಂಬುದು ಆರೋಪಿಗಳಿಗೆ ತಿಳಿದಿತ್ತು. ಲಾರಿ ಮಾಲೀಕರು ಜಿಪಿಆರ್‌ಎಸ್ ಮೂಲಕ ವಾಹನ ಎಲ್ಲಿದೆ ಎಂದು ಹುಡುಕಿಕೊಂಡು ಬಂದಾಗ, “ನಿಮ್ಮ ಲಾರಿ ಬೇಕಾದರೆ ನಮಗೆ ಇಷ್ಟೇ ಹಣ ಕೊಡಬೇಕು” ಎಂದು ಮರುಪಾವತಿಗಾಗಿ (Ransom) ಭಾರಿ ಬೇಡಿಕೆ ಇಟ್ಟು ಹಣ ವಸೂಲಿ ಮಾಡಲು ಈ ಗ್ಯಾಂಗ್ ಪ್ಲಾನ್ ಮಾಡಿಕೊಂಡಿತ್ತು ಎನ್ನಲಾಗಿದೆ.

ಘಟನೆ ನಡೆದ ತಕ್ಷಣವೇ ಲಾರಿ ಚಾಲಕ ಸೂರ್ಯನಗರ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಮನಗಂಡ ಸೂರ್ಯನಗರ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಪ್ಪ ಹಾಗೂ ಸಿಬ್ಬಂದಿಗಳ ನೇತೃತ್ವದ ವಿಶೇಷ ತಂಡ ತಕ್ಷಣವೇ ಕಾರ್ಯಪ್ರವೃತ್ತವಾಯಿತು. ತಾಂತ್ರಿಕ ವಿಶ್ಲೇಷಣೆ ಹಾಗೂ ಖಚಿತ ಮಾಹಿತಿ ಆಧಾರದ ಮೇಲೆ ಜಾಲ ಬೀಸಿದ ಪೊಲೀಸರು, ದರೋಡೆಯಾದ ಲಾರಿ ಸರ್ಜಾಪುರದ ಸೋಂಪುರ ಪ್ರದೇಶದಲ್ಲಿ ಅಡಗಿಸಿಡಲಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.

​ತಕ್ಷಣವೇ ಇಡೀ ಪ್ರದೇಶವನ್ನು ಸುತ್ತುವರಿದ ಪೊಲೀಸರು ಮೂವರು ಆರೋಪಿಗಳನ್ನು ಕೇವಲ ೨೪ ಗಂಟೆಯೊಳಗೆ ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ದರೋಡೆಯಾಗಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

​ಬಂಧಿತ ಪ್ರಮುಖ ಆರೋಪಿ ಶರತ್ ಕುಮಾರ್ ಈ ಹಿಂದೆಯೂ ಇಂತಹದ್ದೇ ರಾಬರಿ (ದರೋಡೆ) ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೇ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅತ್ಯಂತ ಚುರುಕಾಗಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಸದೆಬಡಿದ ಸೂರ್ಯನಗರ ಪೊಲೀಸರ ದಕ್ಷತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

 


Share News