ಕಿತ್ತೂರು: ಕಿತ್ತೂರು ತಾಲೂಕಿನ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸರಣಿ ಮನೆಗಳ್ಳತನ ನಡೆಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಕಿತ್ತೂರು ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಕಿತ್ತೂರು ಸಮೀಪದ ಅವರಾದಿ ಹಾಗೂ ಸಂಗೋಳ್ಳಿ ಗ್ರಾಮಗಳಲ್ಲಿ ನಡೆದಿದ್ದ ಪ್ರಮುಖ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಕೊನೆಗೂ ಕಳ್ಳರನ್ನು ಕಟಾಕಟೆಗೆ ತಳ್ಳಿದ್ದಾರೆ.
ಹೊಳಿ ನಾಗಲಾಪುರ ಗ್ರಾಮದ ಪತ್ರಯ್ಯ ನಿಂಗಯ್ಯ ಹಿರೇಮಠ ಹಾಗೂ ಬೈಲಹೊಂಗಲದ ಗುಂಡ್ಲೂರ ಚಾಳ್ ನಿವಾಸಿ ಅನಿಲಕುಮಾರ ಹಿರೇಮಠ ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ತನಿಖೆಗೆ ಒಳಪಡಿಸಲಾಗಿದೆ.
ಬಂಧಿತ ಕಳ್ಳರಿಂದ ಒಟ್ಟು 60 ಗ್ರಾಂ ಚಿನ್ನದ ಆಭರಣಗಳು, ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಭರತ್ ಎಸ್. ಗಂಗಾಧರ ಹಂಪಣ್ಣವರ ನೇತೃತ್ವದ ತಂಡದಲ್ಲಿದ್ದ ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ ಗಳಿಗಿ, ಸುನಿಲ್ ಮುರಗೋಡ, ಅದೃಷ್ ಚಿಕ್ಕೇರಿ, ಶರೀಫ್ ದಪೇದಾರ್, ನಾಗರಾಜ್ ಕಡಗನ್ನವರ್ ಹಾಗೂ ಮಂಜುನಾಥ್ ಕಂಬಾರ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.