ಚನ್ನಗಿರಿ: ತಾಲೂಕಿನ ಬೆಟ್ಟಕಡೂರು ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಶಾಕ್ ನೀಡಿ ಕಾಡುಹಂದಿಯನ್ನು ಬೇಟೆಯಾಡಿದ್ದ ಮೂವರು ಆರೋಪಿಗಳನ್ನು ದಾವಣಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬೆಟ್ಟಕಡೂರು ಗ್ರಾಮದ ನಿವಾಸಿಗಳಾದ ಮೂಡಲಗಿರಿಯಪ್ಪ (75), ಸಂದೀಪ್ (39) ಮತ್ತು ಮೋಹನ್ (40) ಬಂಧಿತ ಆರೋಪಿಗಳಾಗಿದ್ದಾರೆ.
ಬೆಟ್ಟಕಡೂರು ಗ್ರಾಮದ ಬಳಿ ವನ್ಯಜೀವಿಯೊಂದನ್ನು ಬೇಟೆಯಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿಗಳ (RFO) ಸೂಕ್ತ ಮಾರ್ಗದರ್ಶನದಲ್ಲಿ, ಉಪವಲಯಾರಣ್ಯಾಧಿಕಾರಿ ರಾಘವೇಂದ್ರ ಅಣ್ಣಾನಾಯ್ಕ ಹಾಗೂ ಸಿಬ್ಬಂದಿಗಳ ತಂಡವು ತಕ್ಷಣವೇ ಸ್ಥಳಕ್ಕೆ ತೆರಳಿ ಮಿಂಚಿನ ದಾಳಿ ನಡೆಸಿದೆ. ಈ ವೇಳೆ ಕಾಡುಹಂದಿ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಪರಿಕರಗಳ ಸಮೇತ ಮೂವರು ಆರೋಪಿಗಳನ್ನು ಅರಣ್ಯ ಸಿಬ್ಬಂದಿ ರೆಡ್-ಹ್ಯಾಂಡ್ ಆಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್ ತಂತಿ ಸಂಪರ್ಕ ಕಲ್ಪಿಸಿ ಕಾಡುಹಂದಿಯನ್ನು ಬೇಟೆಯಾಡಿದ್ದರು ಎನ್ನಲಾಗಿದೆ. ದಾಳಿ ವೇಳೆ ಅಂದಾಜು 80 ಕೆ.ಜಿ. ತೂಕದ, ಸುಮಾರು 2 ವರ್ಷ ಪ್ರಾಯದ ಗಂಡು ಕಾಡುಹಂದಿಯ ಕಳೇಬರವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವನ್ಯಜೀವಿಗಳನ್ನು ಬೇಟೆಯಾಡುವುದು ಕಾನೂನುಬಾಹಿರವಾಗಿದ್ದು, ಬಂಧಿತ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act) ಯ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಕಾಡುಪ್ರಾಣಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಸದಾ ಜಾಗೃತವಾಗಿದ್ದು, ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.