ಶಿವಮೊಗ್ಗದಲ್ಲಿ ಭೀಕರ ಕೃತ್ಯವೆಸಗಿದ್ದ ಗಾಂಜಾ ವ್ಯಸನಿ: ಅಜ್ಜಿ ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್, ಕಾಲಿಗೆ ಗುಂಡೇಟು!
ಶಿವಮೊಗ್ಗ ನಗರದಲ್ಲಿ ವೃದ್ಧ ಅಜ್ಜಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಗಾಂಜಾ ವ್ಯಸನಿ ಆರೋಪಿಯನ್ನು ಬಂಧಿಸುವ ವೇಳೆ ಸಿನೆಮಾ ಮಾದರಿಯಲ್ಲಿ ಪೊಲೀಸ್ ಫೈರಿಂಗ್ ನಡೆದಿದೆ. ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಸದ್ಯ ಪೊಲೀಸರು ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.
ಕಿಶೋರ್ (28) ಪೊಲೀಸ್ ಫೈರಿಂಗ್‌ನಲ್ಲಿ ಗಾಯಗೊಂಡು ಬಂಧಿತನಾದ ಆರೋಪಿಯಾಗಿದ್ದಾನೆ. ಈತ ತೀವ್ರ ಗಾಂಜಾ ವ್ಯಸನಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಶಿವಮೊಗ್ಗದ ಆನಂದರಾವ್ ಬಡಾವಣೆಯಲ್ಲಿ ತನ್ನದೇ ಅಜ್ಜಿ ಸುಶೀಲಮ್ಮ (65) ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆಗೈದು ಈತ ತಲೆಮರೆಸಿಕೊಂಡಿದ್ದ.
ಆರೋಪಿ ಕಿಶೋರ್ ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ದೊಡ್ಡಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಸತ್ಯನಾರಾಯಣ ನೇತೃತ್ವದ ಪೊಲೀಸ್ ತಂಡ ಆತನನ್ನು ಸುತ್ತುವರೆದಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಕ್ರೈಂ ಪೊಲೀಸ್ ಸಿಬ್ಬಂದಿ ಗಣೇಶ್ ಅವರ ಮೇಲೆ ದಿಢೀರ್ ಹಲ್ಲೆ ನಡೆಸಿದ್ದಾನೆ.
ಪೊಲೀಸರು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಸಹ, ಆರೋಪಿ ಕಿಶೋರ್ ಹಲ್ಲೆಯನ್ನು ಮುಂದುವರಿಸಿದ್ದಾನೆ. ಇದರಿಂದಾಗಿ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರು ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಸ್ಥಳದಲ್ಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಕಿಶೋರ್‌ನನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ತ ಆರೋಪಿಯ ದಾಳಿಯಿಂದ ಗಾಯಗೊಂಡಿರುವ ಕ್ರೈಂ ಪೊಲೀಸ್ ಗಣೇಶ್ ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಅವರು ಘಟನಾ ಸ್ಥಳ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದ ಕೊಲೆಗಡುಕನನ್ನು ಕೆಲವೇ ಗಂಟೆಗಳಲ್ಲಿ ಸದೆಬಡಿದ ದೊಡ್ಡಪೇಟೆ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
