ಹಾವೇರಿ: ದೇಶಸೇವೆಯ ಕರ್ತವ್ಯದಲ್ಲಿದ್ದಾಗಲೇ ಸಂಭವಿಸಿದ ದುರಂತದಲ್ಲಿ ಹಾವೇರಿ ಜಿಲ್ಲೆಯ ಹೆಮ್ಮೆಯ ಯೋಧರೊಬ್ಬರು ವೀರಮರಣ ಹೊಂದಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಮಿಸ್ ಫೈರಿಂಗ್ (ಗುಂಡು ಹಾರಿದ) ಘಟನೆಯಲ್ಲಿ ಭಾರತೀಯ ನೌಕಾಪಡೆಯ (Indian Navy) ಯೋಧ ಯಶೋಧರ್ ವಡ್ಡರ್ (29) ಅವರು ಹುತಾತ್ಮರಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ನಿವಾಸಿಯಾಗಿದ್ದ ಯಶೋಧರ್ ಅವರು ಸಣ್ಣ ವಯಸ್ಸಿನಲ್ಲೇ ದೇಶಸೇವೆಗೆ ಸೇರಿದ್ದರು. 2016ರ ಬ್ಯಾಚ್‌ನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದ ಅವರು, ಕಳೆದ 10 ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ದೇಶದ ಗಡಿ ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಕೇರಳದ ಕೊಚ್ಚಿ ನೌಕಾನೆಲೆಯಲ್ಲಿ ಅವರು ಕರ್ತವ್ಯದಲ್ಲಿದ್ದರು.
ಕರ್ತವ್ಯದ ಅವಧಿಯಲ್ಲಿ ಅನಿರೀಕ್ಷಿತವಾಗಿ ನಡೆದ ಮಿಸ್ ಫೈರಿಂಗ್ ದುರಂತದಲ್ಲಿ ಯಶೋಧರ್ ಅವರು ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅವರ ಸ್ವಗ್ರಾಮ ಉಪ್ಪುಣಸಿಯಲ್ಲಿ ಜನಸ್ತೋಮ ಜಮಾಯಿಸಿದೆ. ದೇಶಕ್ಕಾಗಿ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ಹುತಾತ್ಮ ಯೋಧ ಯಶೋಧರ್ ವಡ್ಡರ್ ಅವರ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಈಗಾಗಲೇ ಕೊಚ್ಚಿಯಿಂದ ಅವರ ಸ್ವಗ್ರಾಮವಾದ ಉಪ್ಪುಣಸಿಗೆ ತರಲಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧನಿಗೆ ಸಕಲ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಜಿಲ್ಲಾಡಳಿತ ಮತ್ತು ಗ್ರಾಮಸ್ಥರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ವೀರ ಯೋಧನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾರ್ವಜನಿಕರು ಪ್ರಾರ್ಥಿಸಿದ್ದಾರೆ.